ಭ್ರಷ್ಟರ ವಿರುದ್ಧ ಹೋರಾಟ; ವಾಗ್ದಾಳಿಗೆ ಹೆದರುವುದಿಲ್ಲ: ಪ್ರಧಾನಿ
ನರೇಂದ್ರ ಮೋದಿ | Photo: PTI
ಗುವಾಹಟಿ : ಪ್ರತಿಪಕ್ಷ ‘ಇಂಡಿಯಾ’ ಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತನ್ನ ಮೇಲಿನ ವಾಗ್ದಾಳಿ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ನಿಲ್ಲಿಸದು ಎಂದಿದ್ದಾರೆ.
ಪ್ರತಿಪಕ್ಷ ‘ಇಂಡಿಯಾ’ ಮೈತ್ರಿಕೂಟ ಹೊಸದಿಲ್ಲಿಯಲ್ಲಿ ರವಿವಾರ ರ್ಯಾಲಿ ನಡೆಸಿದ ಗಂಟೆಗಳ ಬಳಿಕ ಅವರು ಈ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ಅವರ ಸ್ಥಾನಮಾನ ಪರಿಗಣಿಸದೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಮೀರತ್ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ಮೋದಿ ಅವರನ್ನು ನಿಲ್ಲಿಸಲು ಸಾಧ್ಯವಿಲ್ಲ. ಪ್ರತಿ ಭ್ರಷ್ಟ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’’ ಎಂದರು.
‘‘ಮೋದಿ ಹೆದರುತ್ತಾರೆ ಎಂದು ಅವರು ಭಾವಿಸಿದ್ದಾರೆ. ಆದರೆ, ಈ ಹಿಂದಿಗಿಂತ ಹೆಚ್ಚು ಭ್ರಷ್ಟರ ವಿರುದ್ಧ ಹೋರಾಡುವ ನನ್ನ ಸಂಕಲ್ಪವನ್ನು ಬಲಪಡಿಸಿದೆ. ಭಾರತ ನನ್ನ ಕುಟುಂಬ ಹಾಗೂ ನಾನು ಯಾವುದಕ್ಕೂ ಭಯ ಪಡುವುದಿಲ್ಲ’’ ಎಂದು ಪ್ರಧಾನಿ ಅವರು ಹೇಳಿದರು.
ದಿಲ್ಲಿ ಅಬಕಾರಿ ನೀತಿಯಲ್ಲಿ ಇತ್ತೀಚೆಗೆ ಬಂಧಿತರಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಭ್ರಷ್ಟಾಚಾರದ ವಿರುದ್ಧ ಎನ್ ಡಿ ಎ ಸರಕಾರದ ಹೋರಾಟದ ಕಾರಣದಿಂದ ಕೆಲವು ನಾಯಕರು ಕಾರಾಗೃಹದ ಕಂಬಿಯ ಹಿಂದೆ ಇದ್ದಾರೆ ಎಂದು ಅವರು ಹೇಳಿದರು.