ಎಫ್ಐಐಟಿ-ಜೆಇಇ ವಿದ್ಯಾರ್ಥಿಗಳಿಂದ 250 ಕೋಟಿ ರೂ. ಸಂಗ್ರಹಿಸಿದೆ: ಈಡಿ
Photo : FIITJEE/Facebook
ಹೊಸದಿಲ್ಲಿ: ಎಫ್ಐಐಟಿ-ಜೆಇಇ (ಫಾರಂ ಫಾರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್) ತರಬೇತಿ ಕೇಂದ್ರಗಳು 14,441 ವಿದ್ಯಾರ್ಥಿಗಳಿಂದ 250.2 ಕೋಟಿ ರೂ. ಸಂಗ್ರಹಿಸಿದೆ. ಆದರೆ, ಅವರಿಗೆ ಗುಣಮಟ್ಟದ ಶೈಕ್ಷಣಿಕ ಸೇವೆಯನ್ನು ನೀಡಿಲ್ಲ ಎಂದು ಜಾರಿ ನಿರ್ದೇಶನಾಲಯ ಶನಿವಾರ ಆರೋಪಿಸಿದೆ.
ಸಂಸ್ಥೆಯು ಪ್ರಸಕ್ತ ಶೈಕ್ಷಣಿಕ ವರ್ಷ 2025-26ರಿಂದ 2028-29ರ ವರೆಗಿನ ಅವಧಿಯಲ್ಲಿ ನಡೆಯಲಿರುವ ತರಗತಿಗಳಿಗೆ ಶುಲ್ಕವನ್ನು ಸಂಗ್ರಹಿಸಿದೆ.
ಪ್ರಾಥಮಿಕವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲು 1992ರಲ್ಲಿ ಎಫ್ಐಟಿ-ಜೆಇಇಯನ್ನು ಸ್ಥಾಪಿಸಲಾಯಿತು.
ನೋಯ್ಡಾ, ದಿಲ್ಲಿ, ಲಕ್ನೋ ಹಾಗೂ ಭೋಪಾಲ ಸೇರಿದಂತೆ ಇತರ ಸ್ಥಳಗಳಲ್ಲಿ ದಾಖಲಿಸಿದ ಪ್ರಥಮ ಮಾಹಿತಿ ವರದಿ ಆಧಾರದಲ್ಲಿ ಈ ಸಂಸ್ಥೆಯ ವಿರುದ್ಧ ಹಣ ಅಕ್ರಮ ವರ್ಗಾವಣೆ ಆರೋಪದ ತನಿಖೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಿದೆ.
ನಾವು ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಿದ ಬಳಿಕ ಸಂಸ್ಥೆ ತನ್ನ ಕೇಂದ್ರಗಳನ್ನು ಮುಚ್ಚಿದೆ. ಇದರಿಂದ ವಿದ್ಯಾರ್ಥಿಗಳು ಗೊಂದಲದಲ್ಲಿ ಬಿದ್ದಿದ್ದಾರೆ ಎಂದು ವಿದ್ಯಾರ್ಥಿಗಳ ಹೆತ್ತವರು ಜನವರಿಯಲ್ಲಿ ಆರೋಪಿಸಿದ್ದರು.
ಗಾಝಿಯಾಬಾದ್, ಲಕ್ನೋ, ಮೀರತ್, ನೋಯ್ಡಾ, ಪ್ರಯಾಗ್ರಾಜ್, ದಿಲ್ಲಿ, ಭೋಪಾಲ್, ಗ್ವಾಲಿಯರ್, ಇಂದೋರ್, ಫರೀದಾಬಾದ್, ಗುರುಗ್ರಾಮ್ ಹಾಗೂ ಮುಂಬೈಯಲ್ಲಿರುವ 32 ತರಬೇತಿ ಕೇಂದ್ರಗಳು ಇದ್ದಕ್ಕಿದ್ದಂತೆ ಬಾಗಿಲು ಮುಚ್ಚಿವೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ಆರೋಪಿಸಿದೆ.
ಇದರಿಂದ 15,000 ವಿದ್ಯಾರ್ಥಿಗಳು ಹಾಗೂ ಹೆತ್ತವರು ವಿಪರೀತ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಜಾರಿ ನಿದೇಶನಾಲಯ ಹೇಳಿದೆ.