ಪ್ರಧಾನಿ ಮೋದಿ ಕುರಿತ ಧ್ರುವ್ ರಾಥಿ ವೀಡಿಯೋ ಶೇರ್ ಮಾಡಿದ ವಕೀಲನ ವಿರುದ್ಧ ಪ್ರಕರಣ ದಾಖಲು
ಧ್ರುವ್ ರಾಥಿ , ನರೇಂದ್ರ ಮೋದಿ | PTI
ಮುಂಬೈ: ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿ ಖ್ಯಾತ ಯುಟ್ಯೂಬರ್ ಧ್ರುವ್ ರಾಥಿ ಅವರು ಪೋಸ್ಟ್ ಮಾಡಿರುವ ವೀಡಿಯೋವನ್ನು ಶೇರ್ ಮಾಡಿದ್ದಕ್ಕಾಗಿ ಮಹಾರಾಷ್ಟ್ರದ ಮೀರಾ ಭಾಯಂದರ್ ವಸಾಯಿ ವಿರಾ ಪೊಲೀಸರು ವಕೀಲ ಅದೇಶ್ ಬಾನ್ಸೋಡೆ ಎಂಬವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಅದೇಶ್ ಅವರು ಸಿಪಿಐ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಶನ್ ಪಕ್ಷದ ಕಾರ್ಯದರ್ಶಿಯಾಗಿದ್ದಾರೆ.
ಧ್ರುವ್ ರಾಥಿ ಅವರ “ಮೈಂಡ್ ಆಫ್ ಎ ಡಿಕ್ಟೇಟರ್” ಎಂಬ ಶೀರ್ಷಿಕೆಯ ವೀಡಿಯೋವನ್ನು ಬಾರ್ ಅಸೋಸಿಯೇಶನ್ ಆಫ್ ವಸಾಯಿ ಇದರ ವಾಟ್ಸ್ಯಾಪ್ ಗ್ರೂಪ್ಗೆ ಮೇ 20ರಂದು ಅದೇಶ್ ಹಂಚಿಕೊಂಡಿದ್ದರಲ್ಲದೆ ಜೊತೆಗೆ “ಮತದಾನಕ್ಕೆ ತೆರಳುವ ಮುನ್ನ ಈ ವೀಡಿಯೋ ವೀಕ್ಷಿಸಿ” ಎಂಬ ಸಂದೇಶ ಕೂಡ ಪೋಸ್ಟ್ ಮಾಡಿದ್ದರು. ಐದನೇ ಹಂತದ ಲೋಕಸಭಾ ಚುನಾವಣೆ ನಡೆದ ದಿನ ಅವರು ಈ ವೀಡಿಯೋ ಶೇರ್ ಮಾಡಿದ್ದರು.
ಅದೇಶ್ ಅವರು “ಆಕ್ಷೇಪಾರ್ಹ” ವೀಡಿಯೋ ಶೇರ್ ಮಾಡಿದ್ದಾರೆ ಎಂದು ಇನ್ನೊಬ್ಬ ವಕೀಲರು ಪೊಲೀಸರಿಗೆ ದೂರಿದ ನಂತರ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ಮೇ 21ರಂದು ದಾಖಲಿಸಿದ್ದರು.
ಹೆಡ್ಕಾನ್ಸ್ಟೇಬಲ್ ಒಬ್ಬರ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ. “ಆರೋಪಿ ಶೇರ್ ಮಾಡಿದ ವೀಡಿಯೋ ಮತ್ತು ಅದರ ಸಂದೇಶವು ಲೋಕಸಭಾ ಅಭ್ಯರ್ಥಿಗಳ ಕುರಿತು ಸುಳ್ಳು ಹೇಳಿಕೆಗಳನ್ನು ಹೊಂದಿದೆ ಮತ್ತು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ, ಇದು ಪೊಲೀಸ್ ಆಯುಕ್ತರ ಸೂಚನೆಗಳು ಉಲ್ಲಂಘನೆ,” ಎಂದು ದೂರಿನಲ್ಲಿ ಹೇಳಲಾಗಿತ್ತು.
ಈ ಎಫ್ಐಆರ್ ಕಾನೂನುಬಾಹಿರ ಇದು ಜನರ ದನಿಗಳನ್ನು ಹತ್ತಿಕ್ಕುವ ಯತ್ನ ಎಂದು ಅದೇಶ್ ಆರೋಪಿಸಿದ್ದಾರೆ. ಐಪಿಸಿ ಸೆಕ್ಷನ್ 188 ಅನ್ವಯ ಪ್ರಕರಣ ದಾಖಲಿಸುವ ಮುನ್ನ ಪೊಲೀಸರು ಸಂಬಂಧಿತ ಕೋರ್ಟಿನಿಂದ ಅನುಮತಿ ಪಡೆಯಬೇಕಿದೆ ಎಂದೂ ಅವರು ಹೇಳಿದ್ದಾರೆ.
“ಈ ನಿರ್ದಿಷ್ಟ ವೀಡಿಯೋವನ್ನು ಕೋಟ್ಯಂತರ ಜನರು ವೀಕ್ಷಿಸಿದ್ದಾರೆ ಮತ್ತು ಶೇರ್ ಮಾಡಿದ್ದಾರೆ, ಅವರೆಲ್ಲರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದೇ?” ಎಂದು ಅವರು ಪ್ರಶ್ನಿಸಿದ್ದಾರೆ.