ಕೊನೆಗೂ ಎಚ್ಚೆತ್ತುಕೊಂಡಿದೆ | ಪತಂಜಲಿ ವಿರುದ್ಧ ಉತ್ತರಾಖಂಡದ ಕ್ರಮದ ಕುರಿತು ಸುಪ್ರೀಂ ಕೋರ್ಟ್ ಹೇಳಿಕೆ
ಸುಪ್ರೀಂ ಕೋರ್ಟ್ , ಪತಂಜಲಿ | PC : PTI
ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಪತಂಜಲಿ ಆಯುರ್ವೇದ ವಿರುದ್ಧದ ತಪ್ಪುದಾರಿಗೆಳೆಯುವ ಜಾಹೀರಾತುಗಳ ಪ್ರಕರಣದಲ್ಲಿ ನಿಷ್ಕ್ರಿಯತೆಗಾಗಿ ಉತ್ತರಾಖಂಡ ರಾಜ್ಯ ಪರವಾನಿಗೆ ಪ್ರಾಧಿಕಾರಕ್ಕೆ ಛೀಮಾರಿ ಹಾಕಿತು. ಪ್ರಾಧಿಕಾರವು ಪ್ರತಿಯೊಂದರಿಂದಲೂ ನುಣುಚಿಕೊಳ್ಳಲು ಪ್ರಯತ್ನಿಸಿತ್ತು ಎಂದು ಅದು ಹೇಳಿತು. ತನ್ನ ಆದೇಶಗಳನ್ನು ಪಾಲಿಸದ್ದಕ್ಕಾಗಿ ಯೋಗಗುರು ರಾಮ್ ದೇವ್ ಪ್ರವರ್ತನೆಯ ಪತಂಜಲಿ ಆಯುರ್ವೇದವನ್ನೂ ಅದು ತರಾಟೆಗೆತ್ತಿಕೊಂಡಿತು.
ನ್ಯಾಯಾಲಯವು ಮೂಲ ದಾಖಲೆಗಳನ್ನು ಕೇಳಿದಾಗ ಪತಂಜಲಿ ಸಾರ್ವಜನಿಕ ಕ್ಷಮಾಯಾಚನೆಯ ಇ-ಪ್ರತಿಯನ್ನು ಸಲ್ಲಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು,‘ಇದು ಆದೇಶದ ಪಾಲನೆಯಲ್ಲ. ಈ ಪ್ರಕರಣದಲ್ಲಿ ನಾವು ನಮ್ಮ ಕೈಗಳನ್ನು ಮೇಲಕ್ಕೆತ್ತುತ್ತಿದ್ದೇವೆ, ನಮ್ಮ ಆದೇಶಗಳ ಪಾಲನೆಯಾಗದಿರುವುದು ಸಾಕು’ ಎಂದು ಹೇಳಿತು.
ಕ್ಷಮೆಯಾಚನೆ ಪ್ರಕಟಗೊಂಡ ಪ್ರತಿಯೊಂದೂ ವೃತ್ತಪತ್ರಿಕೆಯ ಮೂಲಪುಟವನ್ನು ಸಲ್ಲಿಸಲು ನ್ಯಾಯಾಲಯವು ಪತಂಜಲಿಗೆ ಇನ್ನೊಂದು ಅವಕಾಶವನ್ನು ನೀಡಿತು.
ಇದೇ ವೇಳೆ ನ್ಯಾಯಾಲಯವು ಯೋಗಗುರು ರಾಮ್ ದೇವ್ ಮತ್ತು ಪತಂಜಲಿಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರಿಗೆ ಮೇ 7ರಂದು ನಡೆಯಲಿರುವ ಮುಂದಿನ ವಿಚಾರಣೆಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿತು.
ಈ ನಡುವೆ ಪತಂಜಲಿ ಮತ್ತು ಅದರ ಸೋದರ ಸಂಸ್ಥೆ ದಿವ್ಯಾ ಫಾರ್ಮಸಿಯ 14 ಉತ್ಪನ್ನಗಳ ತಯಾರಿಕೆ ಪರವಾನಿಗೆಗಳನ್ನು ತಾನು ಎ.15ರಂದು ತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಿರುವುದಾಗಿ ಉತ್ತರಾಖಂಡ ರಾಜ್ಯ ಪರವಾನಿಗೆ ಪ್ರಾಧಿಕಾರವು ನ್ಯಾಯಾಲಯಕ್ಕೆ ತಿಳಿಸಿತು.
ಕ್ರಮವನ್ನು ತೆಗೆದುಕೊಳ್ಳುವಲ್ಲಿ ವಿಳಂಬವನ್ನು ಪ್ರಶ್ನಿಸಿದ ಸರ್ವೋಚ್ಚ ನ್ಯಾಯಾಲಯವು,ಪ್ರಾಧಿಕಾರವು ಈಗ ನಿದ್ರೆಯಿಂದ ಎಚ್ಚೆತ್ತುಕೊಂಡಿದೆ. ಕಳೆದ ಒಂಭತ್ತು ತಿಂಗಳುಗಳಿಂದ ನಿಷ್ಕ್ರಿಯವಾಗಿದ್ದ ಅದು ಕೊನೆಗೂ ತನಗೆ ಅಧಿಕಾರ ಮತ್ತು ಹೊಣೆಗಾರಿಕೆಗಳಿವೆ ಎನ್ನುವುದನ್ನು ಅರ್ಥ ಮಾಡಿಕೊಂಡಿದೆ. ಮೂರೇ ದಿನಗಳಲ್ಲಿ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿತು.
ತಾನು ನಿಗಾಯಿರಿಸಿದ್ದೆ ಎಂದು ಪ್ರಾಧಿಕಾರವು ಹೇಳಿಕೊಂಡಿದೆ. ನೀವು ಪ್ರತಿಯೊಂದರಿಂದಲೂ ನುಣುಚಿಕೊಳ್ಳಲು ಪ್ರಯತ್ನಿಸಿದ್ದೀರಿ. ಇದು ನಿಗಾ ಇರಿಸುವ ರೀತಿಯೇ? ಎಚ್ಚರಿಕೆ ವಹಿಸುವಂತೆ ನಾವು ನಿಮಗೆ ತಿಳಿಸಿದ್ದೆವು ಮತ್ತು ನೀವು ನಿಮ್ಮ ಬೆನ್ನನ್ನೇ ಚಪ್ಪರಿಸಿಕೊಳ್ಳುತ್ತಿದ್ದೀರಿ ಎಂದು ಪೀಠವು ಕಿಡಿಕಾರಿತು.
ಉತ್ತರಾಖಂಡ ಸರಕಾರವು ತಯಾರಿಕೆ ಪರವಾನಿಗೆಗಳನ್ನು ರದ್ದುಗೊಳಿಸಿರುವ ಪತಂಜಲಿ ಉತ್ಪನ್ನಗಳಲ್ಲಿ ದಿವ್ಯ ಫಾರ್ಮಸಿಯ ದೃಷ್ಟಿ ಆಯ್ ಡ್ರಾಪ್, ಶ್ವಾಸಾರಿ ಗೋಲ್ಡ್,ಶ್ವಾಸಾರಿ ವಟಿ, ಬ್ರಾಂಕೋಮ್,ಶ್ವಾಸಾರಿ ಪ್ರವಾಹಿ,ಶ್ವಾಸಾರಿ ಅವಲೇಹ, ಮುಕ್ತಾ ವಟಿ ಎಕ್ಸ್ಟ್ರಾ ಪವರ್, ಲಿಪಿಡೋಮ್, ಬಿಪಿ ಗ್ರಿಟ್, ಮಧುಗ್ರಿಟ್, ಮಧುನಾಶಿನಿ ವಟಿ ಎಕ್ಸ್ಟ್ರಾ ಪವರ್, ಲಿವಾಮೃತ ಅಡ್ವಾನ್ಸ್, ಲಿವೊಗ್ರಿಟ್ ಮತ್ತು ಆಯ್ಗ್ರಿಟ್ ಗೋಲ್ಡ್ ಸೇರಿವೆ.