ಹಣಕಾಸು ವಂಚನೆ | ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉದ್ಯಮಿ ಬಂಧನ
PC :facebook | ಸುಂದರ್ ಸಿ. ಮೆನನ್
ತ್ರಿಶೂರ್ : ತ್ರಿಶೂರ್ನಲ್ಲಿ ಹಣಕಾಸು ವಂಚನೆ ಆರೋಪಿಸಿ ಸಲ್ಲಿಸಲಾದ ದೂರುಗಳ ಕುರಿತಂತೆ ಕೇರಳದ ಉದ್ಯಮಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಂದರ್ ಸಿ. ಮೆನನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ರಾಜ್ಯ ಪೊಲೀಸ್ನ ಜಿಲ್ಲಾ ಕ್ರೈಮ್ ಬ್ರಾಂಚ್ನ ದಳ ಮೆನನ್ ಅವರನ್ನು ರವಿವಾರ ಬಂಧಿಸಿದೆ ಹಾಗೂ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ನ್ಯಾಯಾಲಯ ಮೆನನ್ಗೆ ರಿಮಾಂಡ್ ವಿಧಿಸಿದೆ.
2016ರಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದ ಮೆನನ್ ತಾನು ಕೂಡ ನಿರ್ದೇಶಕನಾಗಿದ್ದ ಎರಡು ಸಂಸ್ಥೆಗಳ ಹೆಸರಲ್ಲಿ ಜನರಿಂದ ಠೇವಣಿ ಸ್ವೀಕರಿಸಿರುವುದಕ್ಕೆ ಸಂಬಂಧಿಸಿದ ಹಣಕಾಸು ವಂಚನೆಯ 18 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ವಿವಿಧ ಜನರಿಂದ ಅವರು 7.78 ಕೋ.ರೂ. ಸ್ವೀಕರಿಸಿದ್ದಾರೆ. ಆದರೆ, ಯೋಜನೆಯ ಅವಧಿ ಪೂರ್ಣಗೊಂಡ ಬಳಿಕ ಹಣವನ್ನು ಹಿಂದಿರುಗಿಸಿಲ್ಲ ಎಂದು ಆರೋಪಿಸಲಾಗಿದೆ.
62ಕ್ಕೂ ಅಧಿಕ ಹೂಡಿಕೆದಾರರಿಂದ ಠೇವಣಿ ಸ್ವೀಕರಿಸುವ ಮೂಲಕ ಮೆನನ್ ವಂಚನೆ ನಡೆಸಿದ್ದಾರೆ, ಭಾರತೀಯ ರಿಸರ್ವ್ ಬ್ಯಾಂಕ್ನ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಹಾಗೂ ಯೋಜನೆಯ ಅವಧಿ ಪೂರ್ಣಗೊಂಡ ಬಳಿಕವೂ ಹಣವನ್ನು ಹಿಂದಿರುಗಿಸಿದೆ ವಂಚನೆ ಎಸಗಿದ್ದಾರೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ಇಲ್ಲಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಮೆನನ್ ವಿರುದ್ಧ 18 ಪ್ರಕರಣಗಳನ್ನು ದಾಖಲಿಸಲಾಗಿದೆ. ತನಿಖೆಯನ್ನು ಕ್ರೈಮ್ ಬ್ರಾಂಚ್ಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.