ಎಂಬಿಬಿಎಸ್ ವಿದ್ಯಾರ್ಥಿಯ ರ್ಯಾಗಿಂಗ್ ಪ್ರಕರಣ: 15 ಮಂದಿ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲು
PC : NDTV
ಪಟನ್: ರ್ಯಾಗಿಂಗ್ ಗೆ ಬಲಿಯಾದ 18 ವರ್ಷ ವಯಸ್ಸಿನ ಎಂಬಿಬಿಎಸ್ ವಿದ್ಯಾರ್ಥಿ ಪ್ರಕರಣದ ಸಂಬಂಧ ಗುಜರಾತ್ ನ ಪಟನ್ ಜಿಲ್ಲೆಯ ವೈದ್ಯಕೀಯ ಕಾಲೇಜೊಂದರ 15 ಮಂದಿ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಸೋಮವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಫ್ಐಆರ್ ಪ್ರಕಾರ, ಆರೋಪಿಗಳು ಶನಿವಾರ ರಾತ್ರಿ ಮೃತಪಟ್ಟ ವಿದ್ಯಾರ್ಥಿಯೂ ಸೇರಿದಂತೆ ಕೆಲವು ಕಿರಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯದ ಕೊಠಡಿಯೊಂದರಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ನಿಲ್ಲುವಂತೆ ಮಾಡಿ, ಅವರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಗಳ ವಿರುದ್ಧ ನರಹತ್ಯೆಗೆ ಸಮವಲ್ಲದ ಹತ್ಯೆಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಮುಂದಿನ ಆದೇಶದವರೆಗೂ ಆರೋಪಿ ವಿದ್ಯಾರ್ಥಿಗಳನ್ನು ಅವರ ವಿದ್ಯಾರ್ಥಿ ನಿಲಯ ಮತ್ತು ಶೈಕ್ಷಣಿಕ ಚಟುವಟಿಕೆಗಳಿಂದ ಅಮಾನತುಗೊಳಿಸಲಾಗಿದೆ ಎಂದು ಪಟನ್ ಜಿಲ್ಲೆಯ ಧಾರ್ಪುರ್ ನಲ್ಲಿರುವ ಜಿಎಂಇಆರ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ರಾತ್ರಿ ಹಿರಿಯ ವಿದ್ಯಾರ್ಥಿಗಳ ರ್ಯಾಗಿಂಗ್ ನಿಂದ ಮೂರು ಗಂಟೆಗಳ ಕಾಲ ನಿಂತುಕೊಂಡಿದ್ದ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮೃತ ಅನಿಲ್ ಮೆತಾನಿಯ, ನಂತರ ಪ್ರಜ್ಞಾಹೀನನಾಗಿ ಕುಸಿದು ಬಿದ್ದಿದ್ದ ಎಂದು ರವಿವಾರ ಕಾಲೇಜಿನ ಡಾ. ಹಾರ್ದಿಕ್ ಶಾ ತಿಳಿಸಿದ್ದರು.