ಮುಂಬೈ | ತಾವೇ ಡ್ರಗ್ಸ್ ಇಟ್ಟು ವ್ಯಕ್ತಿಯೋರ್ವನನ್ನು ಬಂಧಿಸಿದ ನಾಲ್ವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲು
ಮುಂಬೈ: ವ್ಯಕ್ತಿಯೋರ್ವನ ಬಳಿ ಡ್ರಗ್ಸ್ ಇಟ್ಟು ಆತನನ್ನು ಬಂಧಿಸಿದ್ದ ಮುಂಬೈನ ಖಾರ್ ಪೊಲೀಸ್ ಠಾಣೆಯ ನಾಲ್ವರು ಪೊಲೀಸರ ವಿರುದ್ಧ ವಕೋಲಾ ಠಾಣಾ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಸಬ್ ಇನ್ಸ್ಪೆಕ್ಟರ್ ತುಕಾರಾಂ ಓಂಬ್ಳೆ ಮತ್ತು ಕಾನ್ ಸ್ಟೆಬಲ್ ಗಳಾದ ಇಮ್ರಾನ್ ಶೇಖ್, ಸಾಗರ್ ಕಾಂಬಳೆ ಮತ್ತು ಶಿಂಧೆ ಅಲಿಯಾಸ್ ದಬಾಂಗ್ ಶಿಂಧೆ ವಿರುದ್ಧ ವಕೋಲಾ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಬಂಧಿತ ಪೊಲೀಸರ ವಿರುದ್ಧ ಅಪಹರಣ, ಅಕ್ರಮ ಬಂಧನ ಮತ್ತು ಹಲ್ಲೆ ಆರೋಪ ಹೊರಿಸಲಾಗಿದೆ.
ಡೈಲನ್ ಎಸ್ಟ್ ಬೈರೊ ಎಂಬವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಡೈಲನ್ ಎಸ್ಟ್ ಬೈರೊ ಬಂಧನದ ವೇಳೆ ಆತನ ಬಳಿ ಡ್ರಗ್ಸ್ ಇಡುವುದು ಪತ್ತೆಯಾಗಿತ್ತು.
ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಇಬ್ಬರು ಪೊಲೀಸರು ಒಬ್ಬ ವ್ಯಕ್ತಿಯನ್ನು ತಪಾಸಣೆ ನಡೆಸುತ್ತಿರುವುದನ್ನು ತೋರಿಸಿದ್ದು, ಮತ್ತೋರ್ವ ಪೋಲೀಸ್ ಅಧಿಕಾರಿ ತನ್ನ ಜೇಬಿನಿಂದ ಡ್ರಗ್ಸ್ ತೆಗೆದು ಆತನ ಬಳಿ ಇಟ್ಟಿದ್ದಾನೆ. ಡ್ರಗ್ಸ್ ಹೊಂದಿದ್ದ ಆರೋಪದಲ್ಲಿ ಎಸ್ಟ್ ಬೈರೊ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಆದರೆ ಸಿಸಿಟಿವಿ ದೃಶ್ಯಗಳು ವೈರಲ್ ಆದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲವೊಂದು ತಿಳಿಸಿದೆ.