ಐಸಿಸಿ ಪಂದ್ಯಾವಳಿಗೆ ಅಡ್ಡಿಪಡಿಸುವ ಬೆದರಿಕೆಯೊಡ್ಡಿದ್ದ ಖಾಲಿಸ್ತಾನಿ ಉಗ್ರ ಪನ್ನೂನ್ ವಿರುದ್ಧ ಎಫ್ಐಆರ್
ಗುರುಪತ್ವಂತ್ ಸಿಂಗ್ ಪನ್ನೂನ್ | Photo: PTI
ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಆರಂಭಿಕ ಪಂದ್ಯ ಸೇರಿದಂತೆ ಐಸಿಸಿ ಕ್ರಿಕೆಟ್ ವಿಶ್ವಕಪ್ ಗೆ ಅಡ್ಡಿಪಡಿಸುವುದಾಗಿ ಬೆದರಿಕೆಯೊಡ್ಡಿದ ಆರೋಪದಲ್ಲಿ ನಿಷೇಧಿತ ಸಿಖ್ಖ್ಸ್ ಫಾರ್ ಜಸ್ಟೀಸ್ (SFJ) ಸಂಘಟನೆಯ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್ ವಿರುದ್ಧ ಗುಜರಾತ್ ಪೊಲೀಸರು ಶುಕ್ರವಾರ ಎಫ್ಐಆರ್ ದಾಖಲಿಸಿದ್ದಾರೆ.
‘‘ಅಹ್ಮದಾಬಾದ್ ನ ನಾಗರಿಕರಲ್ಲಿ ಭೀತಿಯನ್ನು ಸೃಷ್ಟಿಸಲು ಪನ್ನೂನ್ ಬೆದರಿಕೆ ಕರೆಗಳನ್ನು ಮಾಡಿರುವುದು ನಗರದ ಪೊಲೀಸರ ಗಮನಕ್ಕೆ ಬಂದಿದೆ. ‘‘ಪನ್ನೂನ್ ಓರ್ವ ಘೋಷಿತ ಭಯೋತ್ಪಾದಕನಾಗಿದ್ದು ದ್ವೇಷವನ್ನು ಪ್ರಚಾರ ಮಾಡುವ, ದೇಶದ ಏಕತೆ ಹಾಗೂ ಭದ್ರತೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕರನ್ನು ಪ್ರಚೋದಿಸುವ ದುರುದ್ದೇಶವನ್ನು ಆತ ಹೊಂದಿದ್ದಾನೆ’’ ಎಂದು ಅಹ್ಮದಾಬಾದ್ ಸೈಬರ್ ಅಪರಾಧ ಘಟಕದ ಎಸಿಪಿ ಅಜಿತ್ ರಾಜ್ಯನ್ ಶುಕ್ರವಾರ ತಿಳಿಸಿದ್ದಾರೆ.
‘‘ಅಕ್ಟೋಬರ್ 5ರಂದು ಖಾಲಿಸ್ತಾನದ ಧ್ವಜಗಳೊಂದಿಗೆ ಅಹ್ಮದಾಬಾದ್ ಗೆ ಮುತ್ತಿಗೆ ಹಾಕುವಂತೆ ಹಾಗೂ ಜೂನ್ 18ರಂದು ನಡೆದ ಖಾಲಿಸ್ತಾನ ಟೈಗರ್ಫೋರ್ಸ್ ಗುಂಪಿನ ಕಾರ್ಯನಿರ್ವಹಣಾ ವರಿಷ್ಠ ಹರದೀಪ್ ಸಿಂಗ್ ನಿಜ್ಜಾರ್ ನ ಹತ್ಯೆಗೆ ಸೇಡು ತೀರಿಸುವಂತೆ ಪನ್ನೂನ್ ಜಾಲತಾಣಗಳಲ್ಲಿ ವಾಯ್ಸ್ ಮೆಸೇಜ್ಗಳ ಮೂಲಕ ಕರೆ ನೀಡಿದ್ದ.
‘‘ಆಕ್ಟೋಬರ್ 5 ಅನ್ನು ನೆನಪಿಡಿ. ಅದು ವಿಶ್ವಕಪ್ ಆಗಿರುವುದಿಲ್ಲ. ಅದು ಜಾಗತಿಕ ಭಯೋತ್ಪಾದನಾ ಕಪ್ ನ ಆರಂಭ’’ ಎಂದು ಆತ ವಾಯ್ಸ್ ಮೆಸೇಜ್ ನಲ್ಲಿ ಬೆದರಿಕೆ ಹಾಕಿದ್ದನೆಂದು ಅಹ್ಮದಾಬಾದ್ ನ ಸೈಬರ್ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಗುಜರಾತ್ನ ಹಲವಾರು ಜನರ ಮೊಬೈಲ್ ಪೋನ್ಗಳಿಗೆ ಬ್ರಿಟನ್ನ ದೂರವಾಣಿ ಸಂಖ್ಯೆಯೊಂದರ ಮೂಲಕ ಈ ಪೂರ್ವ ಧ್ವನಿಮುದ್ರಿತ (ಪ್ರಿರೆಕಾರ್ಡಡ್) ವಾಯ್ಸ್ ಮೆಸೇಜ್ಗಳು ಬಂದಿದ್ದವು ಎಂದು ಪೊಲೀಸರು ಹೇಳಿದ್ದಾರೆ.