ಹೊಸೂರು ಟಾಟಾ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
Photo credit:livemint.com
ಹೊಸೂರು (ತಮಿಳುನಾಡು): ತಮಿಳುನಾಡಿನ ಹೊಸೂರು ಟಾಟಾ ಉತ್ಪಾದನಾ ಘಟಕದಲ್ಲಿ ಶನಿವಾರ ಬೆಳಗ್ಗೆ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಪ್ರಾಥಮಿಕ ಮಾಹಿತಿ ವರದಿಗಳ ಪ್ರಕಾರ, ಸೆಲ್ ಫೋನ್ ಉತ್ಪಾದನಾ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಲ್ಲಿಂದ ಕಾರ್ಮಿಕರನ್ನು ತೆರವುಗೊಳಿಸಲಾಗಿದೆ ಎಂದು ಹೇಳಲಾಗಿದೆ.
ANI ಸುದ್ದಿ ಸಂಸ್ಥೆ ಪ್ರಕಾರ, ಈ ಬೆಂಕಿ ಅವಘಡದಲ್ಲಿ ಗಮನಾರ್ಹ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದ್ದು, ಬೆಂಕಿಯನ್ನು ನಿಯಂತ್ರಿಸಲು ಅಗ್ನಿ ಶಾಮಕ ದಳ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ ಸುಮಾರು 5.30ರ ವೇಳೆಗೆ ನಾಗಮಂಗಲಂ ಬಳಿ ಇರುವ ಉದ್ದನಪಲ್ಲಿಯಲ್ಲಿನ ಮೊಬೈಲ್ ಫೋನ್ ಅಕ್ಸೆಸರೀಸ್ ಪೇಂಟಿಂಗ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಹೇಳಲಾಗಿದೆ. ಇದರ ಬೆನ್ನಿಗೇ ದಟ್ಟ ಹೊಗೆ ಮುಚ್ಚಿಕೊಂಡು, ಕಾರ್ಮಿಕರು ಹಾಗೂ ಸ್ಥಳೀಯರಲ್ಲಿ ಭೀತಿ ಸೃಷ್ಟಿಯಾಗಿದೆ. ಘಟನಾ ಸ್ಥಳದಿಂದ ಕಾರ್ಮಿಕರನ್ನು ತೆರವುಗೊಳಿಸಲು ಹಲವಾರು ಅಗ್ನಿಶಾಮಕ ವಾಹನಗಳನ್ನು ರವಾನಿಸಲಾಗಿದ್ದು, ಇಲ್ಲಿಯವರೆಗೆ ಯಾವುದೇ ಗಾಯಾಳುಗಳ ವರದಿಯಾಗಿಲ್ಲ.
ಘಟನಾ ಸಂದರ್ಭದಲ್ಲಿ ಅಂದಾಜು 1,500 ಕಾರ್ಮಿಕರು ಮೊದಲ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಬೆಂಕಿ ಅವಘಡಕ್ಕೆ ಕಾರಣವೇನೆಂದು ಈವರೆಗೆ ತಿಳಿದು ಬಂದಿಲ್ಲ.
ತಮಿಳುನಾಡಿನ ಟಾಟಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿರುವುದನ್ನು ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ನ ವಕ್ತಾರರು ಪತ್ರಿಕಾ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ.