ಮಣಿಪುರ ಮುಖ್ಯಮಂತ್ರಿಯನ್ನು ಮೊದಲು ವಜಾಗೊಳಿಸಿ: ಪ್ರಧಾನಿಗೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯ
ಮಲ್ಲಿಕಾರ್ಜುನ ಖರ್ಗೆ | Photo: PTI
ಹೊಸದಿಲ್ಲಿ: ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯ ವೌನವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಪ್ರಶ್ನಿಸಿದ್ದಾರೆ. ಅವರಿಗೆ ರಾಜ್ಯದ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ಮುಖ್ಯಮಂತ್ರಿ ಎನ್. ಬೀರೇಂದ್ರ ಸಿಂಗ್ ರನ್ನು ವಜಾಗೊಳಿಸುವ ಕೆಲಸವನ್ನು ಅವರು ಮೊದಲು ಮಾಡಬೇಕು ಎಂದು ಅವರು ಹೇಳಿದ್ದಾರೆ.
ಮಣಿಪುರದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ ಖರ್ಗೆ, ಅದು ಎಷ್ಟೇ ಸುಳ್ಳು ಪ್ರಚಾರ ಮಾಡಿದರೂ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದರು.
ಮಣಿಪುರ ಪರಿಸ್ಥಿತಿಯ ಬಗ್ಗೆ ಗೃಹ ಸಚಿವ ಅಮಿತ್ ಶಾ ಕೊನೆಗೂ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಮಾತನಾಡಿದ್ದಾರೆ ಎಂದು ವರದಿಗಳು ತಿಳಿಸಿವೆ ಎಂದು ಖರ್ಗೆ ಹೇಳಿದರು. ‘‘ಕಳೆದ 55 ದಿನಗಳಲ್ಲಿ ಮೋದೀಜಿ ಮಣಿಪುರದ ಬಗ್ಗೆ ಒಂದೇ ಒಂದು ಮಾತನ್ನು ಆಡಿಲ್ಲ. ಅವರು ಮಾತನಾಡುವುದನ್ನು ಪ್ರತಿಯೊಬ್ಬ ಭಾರತೀಯ ಕಾಯುತ್ತಿದ್ದಾರೆ’’ ಎಂದು ಅವರು ಹೇಳಿದರು.
‘‘ಬಂಡುಕೋರ ಸಂಘಟನೆಗಳು ಮತ್ತು ಸಮಾಜವಿರೋಧಿ ಶಕ್ತಿಗಳಿಂದ ಕಳವು ಮಾಡಲಾಗಿರುವ ಶಸ್ತ್ರಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖ್ಯಸ್ಥ ಒತ್ತಾಯಿಸಿದರು.