ಮೊದಲು ಭ್ರಷ್ಟರ ಮೇಲೆ ದಾಳಿ, ನಂತರ ಆಲಿಂಗನ: ಮಹಾರಾಷ್ಟ್ರ ಬೆಳವಣಿಗೆ ಕುರಿತು ಕಪಿಲ್ ಸಿಬಲ್
Photo: PTI
ಹೊಸದಿಲ್ಲಿ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ದಲ್ಲಿ ಬಂಡಾಯದ ಬಾವುಟ ಹಾರಿಸಿ ಮಹಾರಾಷ್ಟ್ರದ ಏಕನಾಥ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲಿಗ ಶಾಸಕರೊಂದಿಗೆ ಸೇರ್ಪಡೆಗೊಂಡು ಎನ್ಸಿಪಿ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿ ಹುದ್ದೆ ಪಡೆದ ಬೆಳವಣಿಗೆ ಕುರಿತು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಕುತೂಹಲಕಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು “ಮೊದಲು ಭ್ರಷ್ಟರ ಮೇಲೆ ದಾಳಿ, ನಂತರ ಅವರೊಂದಿಗೆ ಆಲಿಂಗನ,” ಎಂದು ಬರೆದಿದ್ದಾರೆ.
“ಮೊದಲು ಅವರ ತನಿಖೆಯನ್ನು ಗ್ಯಾರಂಟಿಗೊಳಿಸುವುದು, ನಂತರ ಅವರ ಬೆಂಬಲದ ವಾರಂಟಿ ಪಡೆಯುವುದು. ತನಿಖೆ ವಜಾ. ಇನ್ನು ಮುಂದೆ ಇಡಿ, ಸಿಬಿಐ ಒತ್ತಡವಿಲ್ಲ. ಪರಿಚಿತವೆನಿಸುತ್ತದೆಯಲ್ಲವೇ ಮದರ್ ಆಫ್ ಡೆಮಾಕ್ರೆಸಿ ಕೆಲಸ ಮಾಡುತ್ತಿದೆ!,” ಎಂದು ಸಿಬಲ್ ತಮ್ಮ ಟ್ವೀಟ್ನಲ್ಲಿ ಬರೆದಿದ್ದಾರೆ.
ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಕುರಿತಂತೆ ರವಿವಾರ ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸಿದ್ದ ಕಪಿಲ್ ಸಿಬಲ್, “ಪ್ರಾಯಶಃ ಇದು ಅಮೆರಿಕಾದ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದ ಮದರ್ ಆಫ್ ಡೆಮಾಕ್ರಸಿ ಇರಬೇಕು,” ಎಂದು ವ್ಯಂಗ್ಯವಾಡಿದ್ದರು.