ನಾಳೆ INDIA ಮೈತ್ರಿಕೂಟದ ಪ್ರಥಮ ಸಮನ್ವಯ ಸಮಿತಿ ಸಭೆ ; ಸೀಟು ಹಂಚಿಕೆ ಕಾರ್ಯಸೂಚಿ
Photo: IANS
ಹೊಸದಿಲ್ಲಿ: ಬುಧವಾರ ನಡೆಯಲಿರುವ ವಿರೋಧ ಪಕ್ಷಗಳ ಮೈತ್ರಿಕೂಟವಾದ INDIAದ ಸಮನ್ವಯ ಸಮಿತಿ ಸಭೆಯಲ್ಲಿ ಸೀಟು ಹಂಚಿಕೆ ಸೂತ್ರ ಒಪ್ಪಂದ ಹಾಗೂ ಲೋಕಸಭಾ ಚುನಾವಣೆಗೂ ಮುನ್ನ ದೊಡ್ಡ ಪ್ರಮಾಣದ ಪ್ರಚಾರ ಕಾರ್ಯತಂತ್ರವನ್ನು ರೂಪಿಸುವುದು ಪ್ರಮುಖ ಕಾರ್ಯಸೂಚಿಯಾಗಿರಲಿದೆ ಎಂದು ndtv.com ವರದಿ ಮಾಡಿದೆ.
ವಿರೋಧ ಪಕ್ಷಗಳ 14 ಮಂದಿ ಸದಸ್ಯರ ಅತಿ ಪ್ರಮುಖ ಸಮಿತಿಯ ಸಭೆಯು ಬುಧವಾರ ಸಂಜೆ ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರ ನಿವಾಸದಲ್ಲಿ ನಡೆಯಲಿದೆ.
ಬಿಜೆಪಿ ಅಭ್ಯರ್ಥಿಗಳಿರುವ ಲೋಕಸಭಾ ಸ್ಥಾನದಲ್ಲಿ ವಿರೋಧ ಪಕ್ಷಗಳ ವತಿಯಿಂದ ಜಂಟಿ ಅಭ್ಯರ್ಥಿಯನ್ನು ಹಾಕುವ ಸೀಟು ಹಂಚಿಕೆಯ ಸೂತ್ರವನ್ನು ಆದಷ್ಟೂ ಶೀಘ್ರವಾಗಿ ಅಂತಿಮಗೊಳಿಸಬೇಕು ಎಂದು ಹಲವಾರು ವಿರೋಧ ಪಕ್ಷಗಳ ನಾಯಕರು ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ, ಈ ಸೂತ್ರಕ್ಕೆ ತಲುಪಲು ಪಕ್ಷಗಳು ತಮ್ಮ ಅಹಂ ಹಾಗೂ ಪಟ್ಟಭದ್ರ ಹಿತಾಸಕ್ತಿಗಳನ್ನು ಬದಿಗಿಡಬೇಕು ಎಂದು ಹಲವಾರು ನಾಯಕರು ಪ್ರತಿಪಾದಿಸಿದ್ದಾರೆ.
ಸೀಟು ಹಂಚಿಕೆ ಸೂತ್ರದ ಕುರಿತು ಯಾವುದೇ ಮಾನದಂಡವನ್ನು ಇನ್ನೂ ಅಂತಿಮಗೊಳಿಸಿಲ್ಲವಾದರೂ, ಇತ್ತೀಚಿನ ಚುನಾವಣೆಗಳಲ್ಲಿ ನಿರ್ದಿಷ್ಟ ಕ್ಷೇತ್ರಗಳಲ್ಲಿ ಪಕ್ಷಗಳು ತೋರಿರುವ ಸಾಧನೆಯನ್ನು ಆಧರಿಸಿ ಸೀಟು ಹಂಚಿಕೆ ಸೂತ್ರ ಅಂತಿಮಗೊಳ್ಳುವ ಸಾಧ್ಯತೆ ಇದೆ