ಭಾರತೀಯ ಸೈನಿಕರ ಮೊದಲ ತಂಡ ಮಾಲ್ದೀವ್ಸ್ ನಿಂದ ವಾಪಸ್?
ದ್ವೀಪರಾಷ್ಟ್ರದ ಮಾಧ್ಯಮಗಳ ವರದಿ
ಮಾಲ್ದೀವ್ಸ್ | Photo: NDTV
ಮಾಲೆ : ಮಾಲ್ದೀವ್ಸ್ ನಲ್ಲಿ ಹೆಲಿಕಾಪ್ಟರೊಂದರ ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿದ್ದ ಭಾರತೀಯ ಸೇನಾ ಸಿಬ್ಬಂದಿ ಮಂಗಳವಾರ ಭಾರತಕ್ಕೆ ಮರಳಿದ್ದಾರೆ ಎಂದು ಮಾಲ್ದೀವ್ಸ್ ನ ಮಾಧ್ಯಮಗಳು ವರದಿ ಮಾಡಿವೆ. ಹೆಲಿಕಾಪ್ಟರ್ ಕಾರ್ಯಾಚರಣೆಯ ಉಸ್ತುವಾರಿಯನ್ನು ಅವರು ಭಾರತೀಯ ನಾಗರಿಕ ಸಿಬ್ಬಂದಿಗೆ ವಹಿಸಿದ್ದಾರೆ.
ಅದ್ದು ನಗರದಲ್ಲಿ ಇದ್ದ ಭಾರತೀಯ ಸೈನಿಕರು, ಹೆಲಿಕಾಪ್ಟರೊಂದರ ಕಾರ್ಯಾಚರಣೆಯ ಉಸ್ತುವಾರಿಯನ್ನು ಭಾರತೀಯ ನಾಗರಿಕ ಸಿಬ್ಬಂದಿಗೆ ವಹಿಸಿದ ಬಳಿಕ ಭಾರತಕ್ಕೆ ವಾಪಸಾಗಿದ್ದಾರೆ ಎಂದು ಮಾಲ್ದೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (ಎಮ್ಎನ್ಡಿಎಫ್)ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರು ‘ಅದಾದು ನ್ಯೂಸ್’ ವೆಬ್ ಸೈಟ್ ಗೆ ತಿಳಿಸಿದ್ದಾರೆ.
ಆದರೆ, ಮಾಲ್ದೀವ್ಸ್ ನಿಂದ ಭಾರತೀಯ ಸೇನಾ ಸಿಬ್ಬಂದಿಯ ಮೊದಲ ತಂಡ ವಾಪಸಾಗಿರುವುದನ್ನು ಭಾರತೀಯ ರಕ್ಷಣಾ ಸಚಿವಾಲಯ ಖಚಿತಪಡಿಸಿಲ್ಲ.
ಚೀನಾ ಪರ ನಿಲುವು ಹೊಂದಿದ್ದಾರೆ ಎನ್ನಲಾಗಿರುವ ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು, ನಾಗರಿಕ ಧಿರಿಸಿನಲ್ಲಿರುವ ಸೈನಿಕರು ಸೇರಿದಂತೆ ಯಾವುದೇ ಭಾರತೀಯ ಸೇನಾ ಸಿಬ್ಬಂದಿ ಮೇ 10ರ ಬಳಿಕ ದೇಶದಲ್ಲಿ ಇರುವುದಿಲ್ಲ ಎಂದು ಘೋಷಿಸಿದ್ದಾರೆ.
‘‘ಮೇ 10ರ ಬಳಿಕ ಮಾಲ್ದೀವ್ಸ್ ನಲ್ಲಿ ಯಾವುದೇ ಭಾರತೀಯ ಸೈನಿಕರು ಇರುವುದಿಲ್ಲ. ಸಮವಸ್ತ್ರದಲ್ಲೂ ಇರುವುದಿಲ್ಲ, ನಾಗರಿಕ ಧಿರಿಸಿನಲ್ಲೂ ಇರುವುದಿಲ್ಲ. ಭಾರತೀಯ ಸೈನಿಕರು ಯಾವುದೇ ಧಿರಿಸಿನಲ್ಲಿಯೂ ಮಾಲ್ದೀವ್ಸ್ ನಲ್ಲಿ ಇರುವುದಿಲ್ಲ. ನಾನು ಇದನ್ನು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ’’ ಎಂದು ಮುಯಿಝು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ಕಳೆದ ವಾರ ವರದಿ ಮಾಡಿದ್ದವು.
ಭಾರತ ಮತ್ತು ಮಾಲ್ದೀವ್ಸ್ ನಡುವೆ ಫೆಬ್ರವರಿ 2ರಂದು ಹೊಸದಿಲ್ಲಿಯಲ್ಲಿ ಉನ್ನತ ಮಟ್ಟದ ಮಾತುಕತೆ ನಡೆದ ಬಳಿಕ ಹೇಳಿಕೆಯೊಂದನ್ನು ನೀಡಿದ್ದ ಮಾಲ್ದೀವ್ಸ್ ವಿದೇಶ ಸಚಿವಾಲಯವು, ಮಾಲ್ದೀವ್ಸ್ ನಲ್ಲಿ ಮೂರು ವಾಯುಯಾನ ವೇದಿಕೆಗಳ ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿರುವ ತನ್ನ ಸೇನಾ ಸಿಬ್ಬಂದಿಯನ್ನು ಭಾರತವು ಮೇ 10ರೊಳಗೆ ವಾಪಸ್ ಕರೆಸುತ್ತದೆ ಎಂದು ಹೇಳಿದ್ದರು. ಈ ಪ್ರಕ್ರಿಯೆಯ ಮೊದಲ ಹಂತವು ಮಾರ್ಚ್ 10ರೊಳಗೆ ಪೂರ್ಣಗೊಳ್ಳುತ್ತದೆ ಎಂದಿದ್ದರು.
ಹೆಲಿಕಾಪ್ಟರ್ಗಳ ನಿರ್ವಹಣೆಗೆ ಸೈನಿಕರ ಸ್ಥಾನದಲ್ಲಿ ತಕ್ಕುದಾದ ನಾಗರಿಕ ಸಿಬ್ಬಂದಿಯನ್ನು ನಿಯೋಜಿಸಿದ ಬಳಿಕ ಸೈನಿಕರನ್ನು ವಾಪಸ್ ಕರೆಸಲು ಭಾರತ ಒಪ್ಪಿತ್ತು.
ಕಳೆದ ವರ್ಷ ನಡೆದ ಚುನಾವಣೆಯಲ್ಲಿ, ಭಾರತ ವಿರೋಧಿ ನೀತಿಗಳ ಆಧಾರದಲ್ಲಿ ಮುಯಿಝು ಅಧಿಕಾರಕ್ಕೆ ಬಂದಿದ್ದರು. ಹಿಂದೂ ಮಹಾಸಾಗರದ ಆಯಕಟ್ಟಿನ ಸ್ಥಳದಲ್ಲಿರುವ ಮಾಲ್ದೀವ್ಸ್ ನಿಂದ ಭಾರತವು ತನ್ನ ಸೈನಿಕರನ್ನು ವಾಪಸ್ ಕರೆಸಿಕೊಳ್ಳಬೇಕು ಎಂಬುದಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅವರು ಒತ್ತಾಯಿಸಿದ್ದರು.