ನಾಳೆ ಮೊದಲ ಟ್ವೆಂಟಿ-20 ಪಂದ್ಯ; ಭಾರತದ ಯುವ ತಂಡಕ್ಕೆ ದಕ್ಷಿಣ ಆಫ್ರಿಕಾದ ಸವಾಲು
Photo: PTI
ಡರ್ಬನ್: ಮೂರು ಪಂದ್ಯಗಳ ಟ್ವೆಂಟಿ-20 ಅಂತರ್ರಾಷ್ಟ್ರೀಯ ಸರಣಿಯು ರವಿವಾರ ಇಲ್ಲಿ ಆರಂಭವಾಗಲಿದ್ದು, ಬಲಿಷ್ಠ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಯುವ ಆಟಗಾರರನ್ನು ಒಳಗೊಂಡ ಭಾರತೀಯ ತಂಡಕ್ಕೆ ಸವಾಲೊಡ್ಡಲಿದೆ.
ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ ಆರಂಭವಾಗುವ ತನಕ ಗಾಯದ ಸಮಸ್ಯೆಯ ಕಾರಣದಿಂದ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ. ಪ್ರಮುಖ ವೇಗದ ಬೌಲರ್ ಜಸ್ಟ್ರೀತ್ ಬುಮ್ರಾ ವಿರಾಮ ಪಡೆದಿದ್ದಾರೆ. ಜೂನ್ನಲ್ಲಿ ನಡೆಯುವ ವಿಶ್ವಕಪ್ಗೆ ಮೊದಲು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಟಿ-20 ಭವಿಷ್ಯದ ಬಗ್ಗೆ ಅನಿಶ್ಚಿತತೆ ಆವರಿಸಿದೆ.
ಮುಂದಿನ ತಿಂಗಳು ಐಪಿಎಲ್ ನಡೆಯುವ ತನಕವೂ ಭಾರತದ ಟಿ-20 ವಿಶ್ವಕಪ್ ತಂಡದ ಕುರಿತು ಸ್ಪಷ್ಟ ಚಿತ್ರಣ ಮೂಡಿಬರದು. ಆಟಗಾರರ ಫಾರ್ಮ್ ಹಾಗೂ ಫಿಟ್ನೆಸ್ ಆಯ್ಕೆಯ ಮಾನದಂಡವಾಗಿದೆ.
ಒಂದು ವೇಳೆ ರೋಹಿತ್ ಹಾಗೂ ಕೊಹ್ಲಿ ಟ್ವೆಂಟಿ-20 ತಂಡಕ್ಕೆ ವಾಪಸಾದರೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತದ ಯುವ ತಂಡದಲ್ಲಿ ಮಹತ್ವದ ಬದಲಾವಣೆ ಆಗಬಹುದು.
ಇತ್ತೀಚೆಗೆ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಯುವ ತಂಡವು ಸ್ವದೇಶದಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಆಸ್ಟ್ರೇಲಿಯವನ್ನು 4-1 ಅಂತರದಿಂದ ಮಣಿಸಿತ್ತು. ವಿಶ್ವಕಪ್ ಮುಗಿದ 72 ಗಂಟೆಗಳಲ್ಲಿ ಟ್ವೆಂಟಿ-20 ಸರಣಿಯು ನಡೆದಿತ್ತು. ಆಸ್ಟ್ರೇಲಿಯವು ತನ್ನ ಪ್ರಮುಖ ಬೌಲರ್ಗಳಿಗೆ ವಿಶ್ರಾಂತಿ ನೀಡಿತ್ತು. ಮೂರನೇ ಪಂದ್ಯದ ನಂತರ 9 ವಾರಗಳ ಕಾಲ ಭಾರತದಲ್ಲಿದ್ದ ಕೆಲ ಹಿರಿಯ ಆಟಗಾರರು ಆಸ್ಟ್ರೇಲಿಯಕ್ಕೆ ವಾಪಸಾಗಿದ್ದರು.
ಭಾರತ ತಂಡವು ಜನವರಿ ಮಧ್ಯಭಾಗದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸುವ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಪ್ರಮುಖ ಅಂತರ್ರಾಷ್ಟ್ರೀಯ ಟಿ-20 ಸರಣಿಯನ್ನು ಆಡಲಿದೆ.
ಪ್ರಮುಖ ಬೌಲರ್ಗಳಾದ ಕಾಗಿಸೊ ರಬಾಡ, ಅನ್ರಿಚ್ ನೋರ್ಟ್ಜೆ ಹಾಗೂ ಲುಂಗಿ ಗಿಡಿ ಅನುಪಸ್ಥಿತಿಯ ಹೊರತಾಗಿಯೂ ದಕ್ಷಿಣ ಆಫ್ರಿಕಾದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ರಬಾಡ ವಿಶ್ರಾಂತಿ ಪಡೆದರೆ, ನೋರ್ಟ್ಜೆ ಹಾಗೂ ಲುಂಗಿ ಗಿಡಿ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.
ಬ್ಯಾಟಿಂಗ್ ಕಾಂಬಿನೇಶನ್
ಭಾರತ ಟಿ-20 ಸರಣಿಗಾಗಿ 17 ಆಟಗಾರರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಶ್ರೇಯಸ್ ಅಯ್ಯರ್, ಮುಕೇಶ್ ಕುಮಾರ್ ಹಾಗೂ ಇಶಾನ್ ಕಿಶನ್ ಮಾತ್ರ 50 ಓವರ್ ಮಾದರಿಯ ಕ್ರಿಕೆಟ್ನಲ್ಲೂ ಇದ್ದಾರೆ.
ಆರಂಭಿಕ ಆಟಗಾರರು ಹಾಗೂ ಮೂರನೇ ಕ್ರಮಾಂಕದ ಬ್ಯಾಟರ್ಗಳು ಸೇರಿದಂತೆ ಹಲವು ವಿಚಾರದಲ್ಲಿ ಗೊಂದಲವಿದೆ. ಯಶಸ್ವಿ ಜೈಸ್ವಾಲ್ ಆರಂಭಿಕ ಆಟಗಾರನಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಶುಭಮನ್ ಗಿಲ್ ಎಲ್ಲ ಮೂರು ಮಾದರಿಯ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಋತುರಾಜ್ ಗಾಯಕ್ವಾಡ್ ಆಸೀಸ್ ವಿರುದ್ಧ 52 ಎಸೆತಗಳಲ್ಲಿ 100 ರನ್ ಗಳಿಸಿ ಮಿಂಚಿದ್ದಾರೆ.
ಜೈಸ್ವಾಲ್, ಗಿಲ್ ಹಾಗೂ ಗಾಯಕ್ವಾಡ್ ಅಗ್ರ ಸರದಿಯಲ್ಲಿ ಆಡಿದರೆ, ಇಶಾನ್ ಕಿಶನ್ ಯಾವ ಕ್ರಮಾಂಕದಲ್ಲಿ ಆಡುತ್ತಾರೆಂಬ ಪ್ರಶ್ನೆ ಎದ್ದಿದೆ. ಭಾರತದ ಪ್ರಮುಖ ಟಿ-20 ಬ್ಯಾಟರ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಟಿ-20 ವಿಶ್ವಕಪ್ನಲ್ಲಿ 4ನೇ ಕ್ರಮಾಂಕದಲ್ಲಿ ಸಹಜ ಆಯ್ಕೆಯಾಗಿದ್ದಾರೆ.
ವಿಕೆಟ್ಕೀಪರ್ -ಬ್ಯಾಟರ್ ಇಶಾನ್ ಕಿಶನ್ ಅವರು ಜಿತೇಶ್ ಶರ್ಮಾರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ. ಶರ್ಮಾ 6ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ.
ಶ್ರೇಯಸ್ ಅಯ್ಯರ್ ಐದನೇ ಕ್ರಮಾಂಕದಲ್ಲಿ ಆಡಬಹುದು. ಮಾರ್ಕೊ ಜಾನ್ಸನ್, ಜೆರಾಲ್ಡ್ ಕೊಯೆಟ್ಝಿ ಹಾಗೂ ಆ್ಯಂಡಿಲ್ ಫೆಹ್ಲುಕ್ವಾಯೊ ಅವರಂತಹ ಬೌಲರ್ಗಳ ಶಾರ್ಟ್ಪಿಚ್ ಎಸೆತಗಳನ್ನು ಎದುರಿಸುವ ಸಾಮರ್ಥ್ಯ ಶ್ರೇಯಸ್ಗಿದೆ.
ಒಂದು ವೇಳೆ ಅಯ್ಯರ್ ಆಡುವ ಬಳಗಕ್ಕೆ ಸೇರಿದರೆ ಇನ್ನೋರ್ವ ನಿಯೋಜಿತ ಫಿನಿಶರ್ ರಿಂಕು ಸಿಂಗ್ ಸ್ಥಾನ ವಂಚಿತರಾಗಲಿದ್ದಾರೆ. ರಿಂಕು 5ನೇ ಕ್ರಮಾಂಕದಲ್ಲಿ ಆಡುವ ಉದ್ದೇಶ ಹೊಂದಿದ್ದಾರೆ.
ಪ್ರಸಕ್ತ ಸರಣಿಗೆ ಉಪ ನಾಯಕನಾಗಿರುವ ರವೀಂದ್ರ ಜಡೇಜ 7ನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇದೆ. ಸರಣಿಗೆ ಆಯ್ಕೆಯಾಗದ ಅಕ್ಷರ್ ಪಟೇಲ್ ವಿಶ್ವಕಪ್ ಟೂರ್ನಿಯಲ್ಲಿ 7ನೇ ಕ್ರಮಾಂಕದಲ್ಲಿ ಆಡಬಹುದು.
ವಿಶ್ವದ ನಂ.1 ಟಿ-20 ಬೌಲರ್, ಗೂಗ್ಲಿ ಸ್ಪೆಷಲಿಸ್ಟ್ ರವಿ ಬಿಷ್ಣೋಯ್ ಎರಡನೇ ಸ್ಪಿನ್ನರ್ ಆಗಿ ಆಡುವ ಸಾಧ್ಯತೆಯಿದೆ.
ವೇಗದ ಬೌಲಿಂಗ್ ವಿಭಾಗದಲ್ಲಿ ದೀಪಕ್ ಚಹಾರ್, ಅರ್ಷದೀಪ್ ಸಿಂಗ್ ಹಾಗೂ ಮುಕೇಶ್ ಕುಮಾರ್ ಪ್ರಮುಖ ಬೌಲರ್ ಆಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಆಸ್ಟ್ರೇಲಿಯವು ಹೆಚ್ಚಿನ ಪಂದ್ಯಗಳಲ್ಲಿ ಭಾರತದ ಬೌಲಿಂಗ್ ದಾಳಿಗೆ ಸವಾಲಾಗುತ್ತಾ ಬಂದಿತ್ತು. ದಕ್ಷಿಣ ಆಫ್ರಿಕಾದಲ್ಲಿ ಭಾರತದ ಯುವ ಆಟಗಾರರು ಹೆಚ್ಚುವರಿ ಬೌನ್ಸ್ ಎದುರಿಸಬೇಕಾದ ಸವಾಲಿದೆ.
ಕ್ವಿಂಟನ್ ಡಿಕಾಕ್ ತಂಡದಲ್ಲಿ ಇರದಿದ್ದರೂ ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ನಾಯಕ ಐಡೆನ್ ಮಾರ್ಕ್ರಮ್, ಪವರ್-ಹಿಟ್ಟರ್ ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಯುವಬ್ಯಾಟರ್ ಮ್ಯಾಥ್ಯೂ ಬ್ರೀಟ್ಝ್ಕೆ ಭಾರತದ ಬೌಲರ್ಗಳಿಗೆ ಸವಾಲಾಗಬಲ್ಲರು.
ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್(ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿಕೆಟ್ಕೀಪರ್), ಜಿತೇಶ್ ಶರ್ಮಾ(ವಿಕೆಟ್ಕೀಪರ್), ರವೀಂದ್ರ ಜಡೇಜ(ಉಪ ನಾಯಕ), ವಾಶಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಮುಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ದೀಪಕ್ ಚಹಾರ್.
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಮ್(ನಾಯಕ), ಒಟ್ನಿಯೆಲ್ ಬಾರ್ಟ್ಮ್ಯಾನ್, ಮ್ಯಾಥ್ಯೂ ಬ್ರೀಟ್ಝ್ಕೆ, ನಾಂಡ್ರೆ ಬರ್ಗೆರ್, ಜೆರಾಲ್ಡ್ ಕೊಯೆಟ್ಝಿ(ಮೊದಲ, 2ನೇ ಟಿ-20ಗೆ), ಡೊನಾವನ್ ಫೆರೇರ, ರೀಝಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸನ್(ಮೊದಲ ಹಾಗೂ 2ನೇ ಟಿ-20), ಹೆನ್ರಿಕ್ ಕ್ಲಾಸೆನ್, ಕೇಶವ ಮಹಾರಾಜ್, ಡೇವಿಡ್ ಮಿಲ್ಲರ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಝ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್ ಹಾಗೂ ಲಿಝಾಡ್ ವಿಲಿಯಮ್ಸ್.
ಪಂದ್ಯದ ಸಮಯ: ರಾತ್ರಿ 7:30
(ಭಾರತದ ಕಾಲಮಾನ)