ಉತ್ತರಪ್ರದೇಶ | ಪತ್ರಕರ್ತ ದಿಲೀಪ್ ಸೈನಿ ಹತ್ಯೆ ಪ್ರಕರಣ : ಕಂದಾಯ ಅಧಿಕಾರಿ ಸೇರಿದಂತೆ ಐವರು ಆರೋಪಿಗಳ ಬಂಧನ
ಲಕ್ನೋ: ಪತ್ರಕರ್ತ ದಿಲೀಪ್ ಸೈನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಫತೇಪುರ್ ಪೊಲೀಸರು ಕಂದಾಯ ಅಧಿಕಾರಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ಟೋಬರ್ 30ರಂದು ಉತ್ತರಪ್ರದೇಶದ ಬಿಸೌಲಿ ನಗರದ ದಿಲೀಪ್ ಸೈನಿ ನಿವಾಸದಲ್ಲಿ ಅವರ ಮೇಲೆ ದಾಳಿ ನಡೆದಿತ್ತು. ಈ ವೇಳೆ ರಕ್ಷಣೆಗಾಗಿ ಮಧ್ಯಪ್ರವೇಶಿಸಿದ ಸ್ನೇಹಿತ ಶಾಹಿದ್ ಖಾನ್ ಗೂ ಗಾಯಗಳಾಗಿವೆ.
ಆಸ್ತಿ ಮತ್ತು ಜಮೀನು ವಿವಾದಕ್ಕೆ ಸಂಬಂಧಿಸಿ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸೈನಿ ಮತ್ತು ಆರೋಪಿಗಳು ಪರಿಚಯಸ್ಥರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಮತ್ತು ಇತರ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ ಎಂದು ಫತೇಪುರ್ ಪೊಲೀಸ್ ವರಿಷ್ಠಾಧಿಕಾರಿ ಧವಲ್ ಜೈಸ್ವಾಲ್ ಹೇಳಿದ್ದಾರೆ.
ಸೈನಿ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಮತ್ತು ಕುಟುಂಬ ಲಕ್ನೋದಲ್ಲಿ ವಾಸಿಸುತ್ತಿತ್ತು. ಸೈನಿ ಕೊಲೆ ಬಗ್ಗೆ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ದೂರಿನಲ್ಲಿ, ಆರೋಪಿಗಳು ಅ.30ರಂದು ರಾತ್ರಿ 11:48ರ ಸುಮಾರಿಗೆ ಬಲವಂತವಾಗಿ ಸೈನಿ ಮನೆಗೆ ನುಗ್ಗಿ ಹರಿತವಾದ ಆಯುಧ ಮತ್ತು ಪಿಸ್ತೂಲ್ ನಿಂದ ಹಲ್ಲೆ ನಡೆಸಿದ್ದಾರೆ. ಶಾಹಿದ್ ಖಾನ್ ಎಂಬವರು ಈ ವೇಳೆ ದಿಲೀಪ್ ಸೈನಿಯನ್ನು ರಕ್ಷಿಸಲು ಮುಂದಾಗಿದ್ದು, ಈ ವೇಳೆ ಆತನ ಮೇಲೆಯೂ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ. ಇದಲ್ಲದೆ ಹರ್ಷಿತ್ ಕುಮಾರ್ ಎಂಬಾತನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.