ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು: ಬಿಹಾರದಲ್ಲಿ ಉಲ್ಬಣಿಸಿದ ಪ್ರವಾಹ ಪರಿಸ್ಥಿತಿ
Photo: PTI
ಪಾಟ್ನ: ಸೀತಾಮಾರ್ಹಿಯಲ್ಲಿನ ಕೋಸಿ ಮತ್ತು ಬಾಗ್ಮತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ, ಸೋಮವಾರ ಬಿಹಾರದಲ್ಲಿನ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ತಾರ್ಪುರ್ ಬ್ಲಾಕ್ ನಲ್ಲಿ ಕೋಸಿ ನದಿ ಅಪಾಯದ ಮಟ್ಟ ಮೀರಿದ್ದು, ದರ್ಭಾಂಗದಲ್ಲಿನ ಕಿರ್ತಾರ್ ಪುರ್ ಮತ್ತು ಘನ್ ಶ್ಯಾಮ್ ಪುರ್ ಗ್ರಾಮಗಳು ಪ್ರವಾಹದಲ್ಲಿ ಮುಳುಗಡೆಯಾಗಿವೆ. ಮತ್ತೊಂದೆಡೆ, ಸೀತಾಮಾರ್ಹಿ ಜಿಲ್ಲೆಯ ರುನ್ನಿ ಸೈದಾಪುರ್ ಬ್ಲಾಕ್ ನ ಬಾಗ್ಮತಿ ನದಿಯೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ವರದಿಯಾಗಿದೆ.
“ಪ್ರವಾಹ ಪರಿಸ್ಥಿತಿ ಉಲ್ಬಣಿಸಿದ್ದರೂ, ನಿಯಂತ್ರಣದಲ್ಲಿದೆ. ಗಾಬರಿಗೊಳ್ಳಬೇಕಾದ ಯಾವುದೇ ಕಾರಣವಿಲ್ಲ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ರಾಜ್ಯ ಜಲಸಂಪನ್ಮೂಲ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳು ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿವೆ ಎಂದು ಅವರು ಹೇಳಿದ್ದಾರೆ.
Next Story