ಸಂಸತ್ತಿನಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ: ವಿಪಕ್ಷಗಳ ಸಂಸದರಿಂದ ಸಭಾತ್ಯಾಗ

Photo | PTI
ಹೊಸದಿಲ್ಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆ- 2025 ಅನ್ನು ಮಂಡಿಸಿದ್ದಾರೆ.
ಹೊಸ ಮಸೂದೆಯು ಭಾರತದಲ್ಲಿ ತೆರಿಗೆ ಕಾನೂನುಗಳಲ್ಲಿ ಬಳಸಲಾಗುವ ಪರಿಭಾಷೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ. ಇದರಿಂದ ತೆರಿಗೆದಾರರಿಗೆ ತೆರಿಗೆಗಳನ್ನು ಪಾವತಿಸಲು ಮತ್ತು ರಿಟರ್ನ್ಸ್ ಸಲ್ಲಿಸಲು ಸುಲಭವಾಗಲಿದೆ.
ಸಂಸತ್ತಿನಲ್ಲಿ ಗದ್ದಲದ ನಡುವೆ ನಿರ್ಮಲಾ ಸೀತಾರಾಮನ್ ಅವರು ಮಸೂದೆಯನ್ನು ಮಂಡಿಸಿದ್ದು, ಈ ವೇಳೆ ವಿರೋಧ ಪಕ್ಷದ ಸಂಸದರು ಮಸೂದೆಗೆ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದ್ದಾರೆ.
ಪ್ರಸ್ತಾವಿತ ಕಾನೂನು ಆದಾಯ ತೆರಿಗೆ ಕಾಯ್ದೆ-1961ರಲ್ಲಿಯ ‘ಹಿಂದಿನ ವರ್ಷ’ ಪದವನ್ನು ‘ತೆರಿಗೆ ವರ್ಷ’ ಎಂದು ಬದಲಿಸಲಿದೆ. ಅಲ್ಲದೆ ಮೌಲ್ಯಮಾಪನ ವರ್ಷದ ಪರಿಕಲ್ಪನೆಯನ್ನೂ ಕೈಬಿಡಲಾಗಿದೆ. ಅಸ್ತಿತ್ವದಲ್ಲಿರುವ 1961ರ ಆದಾಯ ತೆರಿಗೆ ಕಾಯ್ದೆಯು 298 ವಿಭಾಗಗಳನ್ನು ಹೊಂದಿದ್ದರೆ ನೂತನ ಆದಾಯ ತೆರಿಗೆ ಮಸೂದೆಯು 536 ವಿಭಾಗಗಳನ್ನು ಒಳಗೊಂಡಿದೆ. ಹಾಲಿ ಕಾಯ್ದೆಯಲ್ಲಿ 14 ಅನುಸೂಚಿಗಳಿದ್ದು, ನೂತನ ಶಾಸನದಲ್ಲಿ ಇದು 16ಕ್ಕೆ ಏರಿಕೆಯಾಗಿದೆ.