ವಿಷಾಹಾರ ಸೇವನೆ: 300ಕ್ಕೂ ಹೆಚ್ಚು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಹಿಳಾ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
Photo: NDTV
ಅಲಿಗಢ (ಉತ್ತರ ಪ್ರದೇಶ): ವಿಷಾಹಾರ ಸೇವನೆಯ ಲಕ್ಷಣಗಳಿದ್ದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ 300ಕ್ಕೂ ಹೆಚ್ಚು ಮಹಿಳಾ ವಿದ್ಯಾರ್ಥಿಗಳನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯದಲ್ಲಿ ರಾತ್ರಿ ಊಟ ಸೇವಿಸಿದ ನಂತರ ಅವರಲ್ಲಿ ಈ ಲಕ್ಷಣಗಳು ಕಂಡು ಬಂದಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಧ್ಯಾಹ್ನದ ವೇಳೆಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನಿಂದ ಬಹುತೇಕ ಎಲ್ಲ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಮುಖ್ಯ ಅಧೀಕ್ಷಕ ಡಾ. ಹ್ಯಾರಿಸ್ ಮನ್ಝೂರ್ ಖಾನ್, “ಬೆಳ್ಳಂಬೆಳಗ್ಗೆ ಯುವತಿಯರು ಆಸ್ಪತ್ರೆಗೆ ಆಗಮಿಸಲು ಪ್ರಾರಂಭಿಸಿದರು. ನಾವು ಸುಮಾರು 300 ಯುವತಿಯರಿಗೆ ಚಿಕಿತ್ಸೆ ನೀಡಿದ್ದೇವೆ. ಅವರಲ್ಲಿ ಚೇತರಿಕೆ ಕಂಡು ಬಂದ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ನಾವು ನಿರಂತರವಾಗಿ ಯುವತಿಯರ ಆರೋಗ್ಯದ ಮೇಲೆ ನಿಗಾ ವಹಿಸಿದ್ದೇವೆ” ಎಂದು ತಿಳಿಸಿದ್ದಾರೆ. ಆಹಾರ ನಂಜಿಗೆ ಒಳಗಾಗಿರುವ ಎಲ್ಲ ಯುವತಿಯರೂ ಬೇಗಂ ಅಝೀಝನ್ ನಿಸಾ ಹಾಲ್ ನ ನಿವಾಸಿಗಳು ಎಂದೂ ಅವರು ಹೇಳಿದ್ದಾರೆ.
ಬೇಗಂ ಅಝೀಝನ್ ನಿಸಾ ಹಾಲ್ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಹಿಳಾ ವಿದ್ಯಾರ್ಥಿ ನಿಲಯವಾಗಿದ್ದು, ಈ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 1,500 ವಿದ್ಯಾರ್ಥಿಗಳಿಗೆ ವಾಸ್ತವ್ಯ ಕಲ್ಪಿಸಲಾಗಿದೆ.