ಪಿಂಚಣಿಗಾಗಿ 46 ವರ್ಷದಿಂದ ಕಾಯುತ್ತಿರುವ 91ರ ವೃದ್ಧೆ!
Photo: PTI
ಕಟಕ್: ನಲುವತ್ತಾರು ವರ್ಷ ಹಿಂದೆ ಮೃತಪಟ್ಟ ಶಾಲಾ ಶಿಕ್ಷಕರೊಬ್ಬರ ಪತ್ನಿಗೆ ಕುಟುಂಬ ಪಿಂಚಣಿ ನೀಡಲು ಒಂದು ತಿಂಗಳ ಒಳಗಾಗಿ ವ್ಯವಸ್ಥೆ ಮಾಡುವಂತೆ ಒಡಿಶಾ ಹೈಕೋರ್ಟ್ ಕೇಂದ್ರಪಾರ ಜಿಲ್ಲಾಧಿಕಾರಿ ಸೂರ್ಯವಂಶಿ ಮಯೂರ್ ವಿಕಾಸ್ ಅವರಿಗೆ ನಿರ್ದೇಶನ ನೀಡಿದೆ.
ಹರ ಸಾಹೂ (91) ಎಂಬ ಮಹಿಳೆಯ ಪತಿ 1977ರ ಆಗಸ್ಟ್ 26ರಂದು ಮೃತಪಟ್ಟಿದ್ದರು. ನಾಲ್ಕು ತಿಂಗಳ ಹಿಂದೆ ಹೈಕೋರ್ಟ್, ಕೇಂದ್ರಪಾರ ಜಿಲ್ಲೆಯ ಜಿಲ್ಲಾಧಿಕಾರಿಗೆ ಸೂಚನೆ ನೀಡಿ ಸಾಹೂ ಅವರಿಗೆ ಕುಟುಂಬ ಪಿಂಚಣಿ ಮಂಜೂರು ಮಾಡುವಂತೆ ಆದೇಶ ಮಾಡಿತ್ತು.
ಕುಟುಂಬ ಪಿಂಚಣಿಗೆ ಅರ್ಹತೆ ಪಡೆದ ದಿನಾಂಕದಿಂದ ಅನ್ವಯವಾಗುವಂತೆ ಪಿಂಚಣಿಯನ್ನು ಹಿಂದಿನ ಬಾಕಿಯ ಸಹಿತ ನೀಡಬೇಕು. ಈ ಆದೇಶ ಕೈಸೇರಿದ ಎರಡು ತಿಂಗಳ ಅವಧಿಯ ಒಳಗಾಗಿ ಪಿಂಚಣಿ ಈ ವೃದ್ಧೆಯ ಕೈಸೇರಬೇಕು ಎಂದು ಸೂಚಿಸಲಾಗಿತ್ತು. 2023ರ ನವೆಂಬರ್ 15ರಂದು ಈ ಆದೇಶ ನೀಡಿದರೂ, ಮಹಿಳೆಗೆ ಇದುವರೆಗೂ ಪಿಂಚಣಿ ಕೈಸೇರಿಲ್ಲ.
ಮಹಿಳೆ ಮತ್ತೆ ಕೋರ್ಟ್ನ ಮೊರೆ ಹೋಗಿದ್ದು, ನ್ಯಾಯಮೂರ್ತಿ ಬಿರಾಜಪ್ರಸನ್ನ ಸಾತಪತಿ ಅವರಿದ್ದ ಏಕ ಸದಸ್ಯ ಪೀಠ ಶುಕ್ರವಾರ ಒಂದು ತಿಂಗಳ ಗಡುವುದು ನೀಡಿದೆ. "ಈ ಆದೇಶದ ಪಾಲನೆಗೆ ಒಂದು ತಿಂಗಳ ಕಾಲಾವಕಾಶ ನೀಡಿ ಈ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ" ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಈ ವಿಸ್ತರಿತ ಅವಧಿಯಲ್ಲೂ ಆದೇಶವನ್ನು ಪಾಲಿಸದಿದ್ದರೆ, ಇದನ್ನು ನ್ಯಾಯಾಲಯ ಆದೇಶದ ಉದ್ದೇಶಪೂರ್ವಕ ಉಲ್ಲಂಘನೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಈ ವೃದ್ಧ ಮಹಿಳೆ ಮೀನುಗಾರಿಕಾ ಇಲಾಖೆಯಲ್ಲಿ ಸೇವೆಯಲ್ಲಿದ್ದು ನಿವೃತ್ತನಾದ ಮಗನ ಜತೆಗೆ ಕೇಂದ್ರಪಾರ ಜಿಲ್ಲೆಯ ಪೆಲೈ ದೆರಕುಂಡಿ ಎಂಬಲ್ಲಿ ವಾಸವಿದ್ದಾರೆ. ಸೊಸೆ ಹಾಗೂ ಐವರು ಮೊಮ್ಮಕ್ಕಳು ಇದ್ದಾರೆ. ಶಾಲೆ ಹಾಗೂ ಸಮೂಹ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ 1991ರಿಂದಲೂ ಮಾಡಿಕೊಂಡ ಮನವಿ ವಿಫಲವಾದ ಹಿನ್ನೆಲೆಯಲ್ಲಿ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು ಎಂದು ತಿಳಿದು ಬಂದಿದೆ.