ಅನಾಹುತಗಳಿಂದ ತಪ್ಪಿಸಿಕೊಳ್ಳಲು ಹವಾಮಾನ ಇಲಾಖೆ ನೀಡುವ ಭಾರಿ ಮಳೆಯ ಮುನ್ಸೂಚನೆಯನ್ನು ಬಳಸಿಕೊಳ್ಳಬೇಕು: IMD ಮುಖ್ಯಸ್ಥ
ಮೃತ್ಯುಂಜಯ್ ಮೊಹಾಪಾತ್ರ | PTI
ಹೊಸದಿಲ್ಲಿ: ಭಾರತೀಯ ಹವಾಮಾನ ಇಲಾಖೆಯು ನೀಡುವ ಭಾರಿ ಮಳೆ ಮನ್ಸೂಚನೆಯು ಕಳೆದ ಐದು ವರ್ಷಗಳಲ್ಲಿ ಶೇ. 30-40ರಷ್ಟು ಸುಧಾರಿಸಿದ್ದು, ಈ ಮನ್ಸೂಚನೆಯನ್ನು ಭಾರಿ ಮಳೆಯ ಸಂದರ್ಭದಲ್ಲಿ ಜೀವ ಮತ್ತು ಆಸ್ತಿಪಾಸ್ತಿ ಹಾನಿಯನ್ನು ಕಡಿಮೆಗೊಳಿಸಲು ಬಳಸಿಕೊಳ್ಳಬೇಕು ಎಂದು ಇಲಾಖೆಯ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ಮಂಗಳವಾರ ಹೇಳಿದ್ದಾರೆ.
ಜುಲೈ 30ರಂದು ಸುರಿದ ಭಾರಿ ಮಳೆಯಿಂದ ಸರಣಿ ಭೂಕುಸಿತವುಂಟಾಗಿ, 226 ಮಂದಿಯ ಸಾವು ಸಂಭವಿಸಲು ಭಾರಿ ಮಳೆ ಸಾಧ್ಯತೆಯನ್ನು ಅಂದಾಜಿಸುವಲ್ಲಿ ಭಾರತೀಯ ಹವಾಮಾನ ಇಲಾಖೆಯ ವೈಫಲ್ಯ ಕಾರಣ ಎಂದು ಕೇರಳ ಸರಕಾರ ಆರೋಪಿಸಿದ ಬೆನ್ನಿಗೇ ಅವರ ಈ ಹೇಳಿಕೆ ಹೊರ ಬಿದ್ದಿದೆ.
“ಕಳೆದ ಐದು ವರ್ಷಗಳಲ್ಲಿ ಭಾರಿ ಮಳೆ ಮುನ್ಸೂಚನೆಯ ನಿಖರತೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ಶೇ. 30-40ರಷ್ಟು ಸುಧಾರಿಸಿದೆ. ಇದು ಮುಂದಿನ ಐದರಿಂದ ಏಳು ವರ್ಷಗಳಲ್ಲಿ ನಿಗಾವಣೆ ಜಾಲ ಹಾಗೂ ಸಾಂಖ್ಯಿಕ ಮಾದರಿ ವ್ಯವಸ್ಥೆಗಳನ್ನು ಅಳವಡಿಸುವ ಮೂಲಕ ಶೇ. 10-15ರವರೆಗೆ ಮತ್ತಷ್ಟು ಸುಧಾರಣೆಯಾಗುವ ಸಾಧ್ಯತೆ ಇದೆ” ಎಂದು ವೀಡಿಯೊ ಸಂದೇಶವೊಂದರಲ್ಲಿ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ಸದ್ಯ, ಭಾರತೀಯ ಹವಾಮಾನ ಇಲಾಖೆಯ ಉಪ ವಿಭಾಗ ಹಾಗೂ ಜಿಲ್ಲಾ ಹಂತದ ಮುನ್ಸೂಚನೆಯು 24 ಗಂಟೆಗೂ ಮುನ್ನ ಶೇ. 80ರಿಂದ ಶೇ. 20ರಷ್ಟು ನಿಖರವಾಗಿದ್ದು, ಐದು ದಿನಗಳ ಅವಧಿಗೆ ಶೇ. 60ರಷ್ಟು ನಿಖರವಾಗಿದೆ ಎಂದೂ ಅವರು ಹೇಳಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನಿಖರತೆಯು ಸುಧಾರಿಸುತ್ತಿರುವಾಗ, ಜೀವ ಮತ್ತು ಆಸ್ತಿಪಾಸಿ ಹಾನಿಯನ್ನು ಕಡಿಮೆಗೊಳಿಸಲು ಈ ಮುನ್ಸೂಚನೆಯನ್ನು ಬಳಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ