ವಿದೇಶಿ ಬಂಡವಾಳ ಹರಿವು: ಹೊಸ ಎತ್ತರ ತಲುಪಿದ ಸೆನ್ಸೆಕ್ಸ್
ಮುಂಬೈ: ಕಳೆದ ಕೆಲ ದಿನಗಳಿಂದ ವಿದೇಶಿ ನಿಧಿ ಒಳಹರಿವಿನ ನಡುವೆ ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳ ವಹಿವಾಟಿನಲ್ಲಿ ಉತ್ತಮ ತೇಜಿ ಕಂಡುಬಂದ ಹಿನ್ನೆಲೆಯಲ್ಲಿ ಗುರುವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸರ್ವಕಾಲಿಕ ದಾಖಲೆ ನಿರ್ಮಿಸಿದವು.
ಸತತ ಆರು ದಿನಗಳ ಏರಿಕೆ ಪ್ರವೃತ್ತಿ ಗುರುವಾರವೂ ಮುಂದುವರಿದಿದ್ದು, 141 ಅಂಕಗಳನ್ನು ಸಂಪಾದಿಸಿದ ಬಿಎಸ್ಇ ಸೆನ್ಸೆಕ್ಸ್ 77479 ಅಂಕಗಳೊಂದಿಗೆ ಹೊಸ ದಾಖಲೆಯೊಂದಿಗೆ ವಹಿವಾಟು ಅಂತ್ಯಗೊಳಿಸಿತು. ಒಂದು ಹಂತದಲ್ಲಿ 306 ಅಂಕ ಏರಿಕೆ ಕಂಡು 77,643ನ್ನು ತಲುಪಿತ್ತು. ಕಳೆದ ಆರು ದಿನಗಳಲ್ಲಿ ಸೆನ್ಸೆಕ್ಸ್ 1022 ಅಂಕ ಏರಿಕೆ ಕಂಡಿದೆ. ಈ ಮಧ್ಯೆ 51 ಅಂಕಗಳ ಏರಿಕೆ ದಾಖಲಿಸಿದ ನಿಫ್ಟಿ ಕೂಡಾ 23567 ಅಂಕಗಳೊಂದಿಗೆ ನೂತನ ದಾಖಲೆ ನಿರ್ಮಿಸಿತು. ದಿನದ ಮಧ್ಯಭಾಗದಲ್ಲಿ 108 ಪಾಯಿಂಟ್ ಹೆಚ್ಚಳ ದಾಖಲಿಸಿ 23624 ಅಂಕವನ್ನು ತಲುಪಿತ್ತು.
"ಭಾರತೀಯ ಈಕ್ವಿಟಿಗಳನ್ನು ನೇರ ವಿದೇಶಿ ಹೂಡಿಕೆ ಖರೀದಿದಾರರು ಕಳೆದ ಮೂರು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದು, ಒಟ್ಟು 12600 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಇದರಲ್ಲಿ ಕೆಲವು ದೊಡ್ಡ ಪ್ರಮಾಣದ ಖರೀದಿಗಳೂ ಸೇರಿವೆ. ದೇಶೀಯವಾಗಿ, ಮಾರುಕಟ್ಟೆ ಧನಾತ್ಮಕ ಹಾದಿಯಲ್ಲಿ ಕ್ರೋಢೀಕರಣಗೊಳ್ಳುತ್ತಿದ್ದು, ಎಫ್ಐಐ ಒಳಹರಿವು ಹಾಗೂ ಆರೋಗ್ಯಕರ ವಿಸ್ತೃತ ಆರ್ಥಿಕತೆಯ ಅಂಶಗಳು ದಾಖಲಾಗಿವೆ. ಇವೆಲ್ಲದರ ಜತೆಗೆ ಪ್ರಗತಿ ದೃಷ್ಟಿಯ ಬಜೆಟ್ ನ ನಿರೀಕ್ಷೆಯಿಂದ ಷೇರು ಮಾರುಕಟ್ಟೆಯಲ್ಲಿ ನಾಗಾಲೋಟ ಮುಂದುವರಿದಿದೆ" ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವೀಸಸ್ ನ ಚಿಲ್ಲರೆ ಸಂಶೋಧನೆ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.
ಸೆನ್ಸೆಕ್ಸ್ ಕಂಪನಿಗಳ ಪೈಕಿ ಜೆಎಸ್ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀನ್, ಆ್ಯಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಕೊಟ್ಯಾಕ್ ಮಹೀಂದ್ರಾ ಬ್ಯಾಂಕ್ ಮತ್ತು ಏಷ್ಯನ್ ಪೇಂಟ್ಸ್ ಉತ್ತಮ ಲಾಭ ಗಳಿಸಿದವು. ಮಹೀಂದ್ರಾ& ಮಹೀಂದ್ರಾ, ಸನ್ ಫಾರ್ಮಾ, ಎನ್ ಟಿಪಿಸಿ, ಇಪ್ರೊ, ಎಸ್ ಬಿಐ ಹಾಗೂ ಪವರ್ ಗ್ರಿಡ್ ಷೇರುಗಳು ಹಿಂದುಳಿದವು.