ದಿಲ್ಲಿ ವಿಧಾನಸಭಾ ಸದಸ್ಯತ್ವದಿಂದ ದಿಲ್ಲಿಯ ಮಾಜಿ ಸಚಿವ ರಾಜ್ ಕುಮಾರ್ ಆನಂದ್ ಅನರ್ಹ

ರಾಜ್ ಕುಮಾರ್ ಆನಂದ್ | Credit: X/@RaajKumarAnand1
ಹೊಸದಿಲ್ಲಿ: ದಿಲ್ಲಿಯ ಮಾಜಿ ಸಮಾಜ ಕಲ್ಯಾಣ ಇಲಾಖೆ ಸಚಿವ ರಾಜ್ ಕುಮಾರ್ ಆನಂದ್ ಅವರನ್ನು ದಿಲ್ಲಿ ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ಶುಕ್ರವಾರ ಸ್ಪೀಕರ್ ರಾಮ್ ನಿವಾಸ್ ಗೋಯಲ್ ತಿಳಿಸಿದ್ದಾರೆ.
ಎಪ್ರಿಲ್ ತಿಂಗಳಲ್ಲಿ ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಯಾಗಲು ರಾಜ್ ಕುಮಾರ್ ಆನಂದ್ ಅವರು ಆಮ್ ಆದ್ಮಿ ಪಕ್ಷ ಹಾಗೂ ದಿಲ್ಲಿ ಸರಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಗೋಯಲ್, “ಜೂನ್ 10ರೊಳಗೆ ಈ ಕುರಿತು ಪ್ರತಿಕ್ರಿಯಿಸುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು. ಅದೇ ನೋಟಿಸ್ ನಲ್ಲಿ ಜೂನ್ 11ರಂದು ಖುದ್ದಾಗಿ ಹಾಜರಾಗುವಂತೆಯೂ ಸೂಚಿಸಲಾಗಿತ್ತು. ಹೀಗಿದ್ದೂ ಅವರು ಹಾಜರಾಗಲಿಲ್ಲ. ಜೂನ್ 14ರಂದು ಖುದ್ದಾಗಿ ಹಾಜರಾಗಲು ಅವರಿಗೆ ಮತ್ತೊಂದು ಅವಕಾಶ ನೀಡಲಾಯಿತು. ಆಗಲೂ ಅವರು ಹಾಜರಾಗಲಿಲ್ಲ. ಹೀಗಾಗಿ ಅವರ ದಿಲ್ಲಿ ವಿಧಾನಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.
2020ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ರಾಜ್ ಕುಮಾರ್ ಆನಂದ್ ಅವರು ಆಪ್ ಪಕ್ಷದ ಅಭ್ಯರ್ಥಿಯಾಗಿ ಪಟೇಲ್ ನಗರ ಮೀಸಲು ಕ್ಷೇತ್ರದಿಂದ ಚುನಾಯಿತರಾಗಿದ್ದರು. ಇದಾದ ನಂತರ ಆಪ್ ಪಕ್ಷವನ್ನು ತೊರೆದಿದ್ದ ರಾಜ್ ಕುಮಾರ್ ಆನಂದ್, ಪಕ್ಷದಲ್ಲಿ ದಲಿತ ನಾಯಕರನ್ನು ನಿರ್ಲಕ್ಷಿಸಲಾಗುತ್ತಿದೆ ಹಾಗೂ ಪಕ್ಷದೊಳಗಿನ ಸ್ವಯಂಸೇವಕರು ಹಾಗೂ ಸಂಘಟನಾತ್ಮಕ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದರು.
ತಮ್ಮ ಅನರ್ಹತೆಯ ಕುರಿತು ರಾಜ್ ಕುಮಾರ್ ಆನಂದ್ ಯಾವುದೇ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.