ಪಾಕಿಸ್ತಾನದ ಮಾಜಿ ವೇಗದ ಬೌಲರ್ ಅಖಿಬ್ ಜಾವೇದ್ ಶ್ರೀಲಂಕಾದ ಬೌಲಿಂಗ್ ಕೋಚ್ ಆಗಿ ನೇಮಕ
ಆಖಿಬ್ ಜಾವೇದ್ | Photo: crictracker.com
ಕೊಲಂಬೊ: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಆಖಿಬ್ ಜಾವೇದ್ ರನ್ನು ತನ್ನ ಪುರುಷರ ಕ್ರಿಕೆಟ್ ತಂಡದ ವೇಗದ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ(SLC)ಶನಿವಾರ ಪ್ರಕಟಿಸಿದೆ.
ರಾಷ್ಟ್ರೀಯ ತಂಡದ ವೇಗದ ಬೌಲಿಂಗ್ ಕೋಚ್ ಆಗಿ ಪಾಕಿಸ್ತಾನದ ಮಾಜಿ ವೇಗಿ ಆಖಿಬ್ ಜಾವೇದ್ ರನ್ನು ನೇಮಿಸಲಾಗಿದೆ ಎಂದು ಪ್ರಕಟಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಯಸುತ್ತಿದೆ. 2024ರ ಜೂನ್ನಲ್ಲಿ ವೆಸ್ಟ್ಇಂಡೀಸ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯುವ ಐಸಿಸಿ ಪುರುಷರ ಟಿ20 ವಿಶ್ವಕಪ್ ತನಕ ಜಾವೇದ್ ಲಂಕಾ ತಂಡದೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ಎಸ್ಎಲ್ಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಜಾವೇದ್ ಪ್ರಸಕ್ತ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಲಾಹೋರ್ ಖಾಲ್ಯಾಂಡರ್ಸ್ನ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕ ಹಾಗೂ ಮುಖ್ಯ ಕೋಚ್ ಹುದ್ದೆ ನಿಭಾಯಿಸುತ್ತಿದ್ದಾರೆ. ಅವರು ಶ್ರೀಲಂಕಾ ಕ್ರಿಕೆಟ್ ನ ಹೊಸ ಹುದ್ದೆಗೆ ಸೇರಲಿದ್ದಾರೆ.
ನಾವು ಆಖಿಬ್ ಜಾವೇದ್ರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ. ಆಟಗಾರನಾಗಿ ಹಾಗೂ ಕೋಚ್ ಆಗಿ ಅವರ ಅಪಾರ ಅನುಭವವು ಮುಂಬರುವ ಪುರುಷರ ಟಿ20 ವಿಶ್ವಕಪ್ ಸಹಿತ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ನಮ್ಮ ಬೌಲರ್ಗಳು ಉತ್ತಮ ಪ್ರದರ್ಶನ ನೀಡಲು ನೆರವಾಗುವ ವಿಶ್ವಾಸವಿದೆ ಎಂದು ಶ್ರೀಲಂಕಾ ಕ್ರಿಕೆಟ್ ಸಿಇಒ ಅಶ್ಲೆ ಡಿ ಸಿಲ್ವಾ ಹೇಳಿದ್ದಾರೆ.
ಜಾವೇದ್ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಪಾಕಿಸ್ತಾನದ ಪರ 163 ಏಕದಿನ ಹಾಗೂ 22 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಒಟ್ಟು 236 ಅಂತರರಾಷ್ಟ್ರೀಯ ವಿಕೆಟ್ ಗಳನ್ನು ಉರುಳಿಸಿದ್ದಾರೆ. 1992ರ ವಿಶ್ವಕಪ್ ವಿಜೇತ ಪಾಕಿಸ್ತಾನ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಕೋಚಿಂಗ್ ಹುದ್ದೆಯಲ್ಲಿ ವಿವಿಧ ರಾಷ್ಟ್ರೀಯ ತಂಡಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.