ಮಣಿಪುರ: ನಾಲ್ವರು ಬಂಡುಕೋರರ ಬಂಧನ
ಸಾಂದರ್ಭಿಕ ಚಿತ್ರ | PC : freepik.com
ಇಂಫಾಲ: ಇಂಫಾಲ ಕಣಿವೆಯ ನಾಲ್ಕು ನಿಷೇಧಿತ ಸಂಘಟನೆಗಳ ನಾಲ್ವರು ಬಂಡುಕೋರರನ್ನು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು.
ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ)ಯ ಓರ್ವ ಸದಸ್ಯೆಯನ್ನು ಇಂಫಾಲ ಪಶ್ಚಿಮ ಜಿಲ್ಲೆಯ ಸಗೊದಲ್ಲಿರುವ ಆಕೆಯ ಮನೆಯಿಂದ ಗುರುವಾರ ಬಂಧಿಸಲಾಗಿದೆ. ಬಂಧಿತೆಯನ್ನು ತೊಕ್ಚೊಮ್ ಒಂಗ್ಬಿ ಅನಿತಾ ದೇವಿ (46) ಎಂಬುದಾಗಿ ಗುರುತಿಸಲಾಗಿದೆ. ಆಕೆಯಿಂದ ಒಂದು ಪಿಸ್ತೂಲ್, ಮ್ಯಾಗಝಿನ್, 33 ಸಜೀವ ಗುಂಡುಗಳು, ಐದು ಸಿಮ್ ಕಾರ್ಡ್ಗಳು ಮತ್ತು ಆರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಟೆನುಗೋಪಲ್ ಜಿಲ್ಲೆಯಲ್ಲಿರುವ ಭಾರತ-ಮ್ಯಾನ್ಮಾರ್ ಗಡಿಯ ಸಮೀಪದಿಂದ ನಿಷೇಧಿತ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (ಯುಎನ್ಎಲ್ಎಫ್-ಕೆ) ಸದಸ್ಯನೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ಇಂಫಾಲ ಪೂರ್ವ ಜಿಲ್ಲೆಯ ಖುರೈ ಚೈರೆನ್ತೊಂಗ್ ನಿವಾಸಿ ಮೊಯಿರಂಗ್ತಮ್ ರಿಕಿ ಸಿಂಗ್ (22) ಎಂಬುದಾಗಿ ಗುರುತಿಸಲಾಗಿದೆ.
ಸ್ಥಳೀಯ ವ್ಯಾಪಾರಿಗಳ ಸುಲಿಗೆಯಲ್ಲಿ ತೊಡಗಿದ್ದ ನಿಷೇಧಿತ ಪಿಆರ್ಇಪಿಎಕೆ ಸಂಘಟನೆಯ ಸಕ್ರಿಯ ಕಾರ್ಯಕರ್ತನೊಬ್ಬನನ್ನು ಕಕ್ಚಿಂಗ್ ಜಿಲ್ಲೆಯ ಸೆಕ್ಮೈಜಿನ್ ನಿಂಗೊಲ್ಖೊಂಗ್ ಎಂಬಲ್ಲಿಂದ ಬಂಧಿಸಲಾಗಿದೆ. ಅವನನ್ನು ಲೈಶ್ರಮ್ ಬಿಶೊರ್ಜಿತ್ ಮೇತೈ (33) ಎಂಬುದಾಗಿ ಗುರುತಿಸಲಾಗಿದೆ.
ಮರದ ಉತ್ಪನ್ನಗಳನ್ನು ಸಾಗಿಸುವ ವಾಹನಗಳಿಂದ ಹಣ ವಸೂಲಿ ಮಾಡುತ್ತಿರುವ ಆರೋಪದಲ್ಲಿ ಇನ್ನೋರ್ವ ವ್ಯಕ್ತಿಯನ್ನು ಇಂಫಾಲ ಪಶ್ಚಿಮ ಜಿಲ್ಲೆಯ ಕಕ್ವ ಎಂಬಲ್ಲಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಯಮ್ನಮ್ ಪ್ರೇಮ್ಜಿತ್ ಮೇತೈ (54) ಎಂಬುದಾಗಿ ಗುರುತಿಸಲಾಗಿದೆ. ಅವನು ನಿಷೇಧಿತ ಕಂಗ್ಲೈಪಕ್ ಕಮ್ಯುನಿಸ್ಟ್ ಪಾರ್ಟಿ (ಅಪುಂಬ)ಯ ಸದಸ್ಯನಾಗಿದ್ದಾನೆ.