ಒಂದೇ ಕುಟುಂಬದ ನಾಲ್ವರನ್ನು ಇರಿದು ಹತ್ಯೆ: ಗ್ರಾಮದಲ್ಲಿ ಬಿಗುವಿನ ವಾತಾವರಣ
ಸಾಂದರ್ಭಿಕ ಚಿತ್ರ
ತಿರುಪ್ಪುರ: ಹಳೆಯ ದ್ವೇಷದ ಕಾರಣಕ್ಕೆ ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮೂವರು ದುಷ್ಕರ್ಮಿಗಳು ಇರಿದು ಕೊಲೆ ಮಾಡಿರುವ ಘಟನೆ ತಿರುಪ್ಪುರ ಜಿಲ್ಲೆಯ ಪಲ್ಲದಂ ಬಳಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಎಲ್ಲ ದುಷ್ಕರ್ಮಿಗಳನ್ನು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸುವವರೆಗೂ ಮೃತದೇಹಗಳನ್ನು ಸ್ವೀಕರಿಸಲು ಅವರ ಸಂಬಂಧಿಕರು ನಿರಾಕರಿಸಿದ್ದಾರೆ. ಪಲ್ಲದಂ ಬಳಿ ಧರಣಿ ನಡೆಸಿದ ಮೃತರ ಸಂಬಂಧಿಕರು, ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾನಿರತರನ್ನು ಸಮಾಧಾನಿಸುವ ಪ್ರಯತ್ನ ಮಾಡಿದ್ದಾರೆ.
ಪೊಲೀಸರ ಪ್ರಕಾರ, ಮೃತರನ್ನು ಸೆಂಥಿಲ್ ಕುಮಾರ್, ಆತನ ತಾಯಿ ಪುಷ್ಪವತಿ, ಸೋದರ ಸಂಬಂಧಿ ಮೋಹನ್ ಹಾಗೂ ಮತ್ತೊಬ್ಬ ಸಂಬಂಧಿಕ ರತಿನಾಂಬೆಲ್ ಎಂದು ಗುರುತಿಸಲಾಗಿದೆ. ಅವರೆಲ್ಲರ ಮೃ ದೇಹಗಳು ಇರಿತದ ಗಾಯಗಳೊಂದಿಗೆ ಪಲ್ಲದಂ ಪಟ್ಟಣದ ಕಲ್ಲಕಿನರು ಗ್ರಾಮದಲ್ಲಿರುವ ಸೆಂಥಿಲ್ ಕುಮಾರ್ ಅಂಗಡಿಯ ಸಮೀಪ ಪತ್ತೆಯಾಗಿವೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಲ್ಲದಂನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಪೊಲೀಸರ ಆರಂಭಿಕ ತನಿಖೆಯಲ್ಲಿ, ಸೆಪ್ಟೆಂಬರ್ 3ರ ರಾತ್ರಿ ಸೆಂಥಿಲ್ ಕುಮಾರ್ ಅವರ ಚಾಲಕನಾಗಿದ್ದ ವೆಂಕಟೇಶ್ ಎಂಬ ವ್ಯಕ್ತಿ, ಮತ್ತಿಬ್ಬರು ವ್ಯಕ್ತಿಗಳೊಂದಿಗೆ ಸೆಂಥಿಲ್ ಕುಮಾರ್ ಮಾಲಕತ್ವದ ಅಂಗಡಿಯ ಬಳಿ ಮದ್ಯ ಸೇವಿಸುತ್ತಾ ಕುಳಿತಿದ್ದರು. ಇದನ್ನು ಕಂಡ ಸೆಂಥಿಲ್ ಕುಮಾರ್ ಅಲ್ಲಿಂದ ತೆರಳುವಂತೆ ಅವರಿಗೆಲ್ಲ ತಾಕೀತು ಮಾಡಿದ್ದಾರೆ ಎಂಬ ಸಂಗತಿ ತಿಳಿದು ಬಂದಿದೆ.
ಆದರೆ, ಸೆಂಥಿಲ್ ಕುಮಾರ್ ಅನ್ನು ಸುತ್ತುವರಿದಿರುವ ಆ ಗುಂಪು, ಅವರ ದೇಹಕ್ಕೆ ಚೂರಿಯಿಂದ ಇರಿದಿದೆ. ಸೆಂಥಿಲ್ ಕುಮಾರ್ ನೋವಿನಿಂದ ನೆರವಿಗಾಗಿ ಕೂಗಿಕೊಂಡಾಗ, ಅವರನ್ನು ರಕ್ಷಿಸಲು ಅವರ ತಾಯಿ, ಸೋದರ ಸಂಬಂಧಿ ಹಾಗೂ ಮತ್ತೊಬ್ಬ ಸಂಬಂಧಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ದುಷ್ಕರ್ಮಿಗಳ ಗುಂಪು ಅವರನ್ನೂ ಇರಿದು ಹತ್ಯೆ ಮಾಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.