ಪುಣೆ | ಮಿನಿ ಬಸ್ ನಲ್ಲಿ ಬೆಂಕಿ: ಖಾಸಗಿ ಸಂಸ್ಥೆಯ ನಾಲ್ವರು ಉದ್ಯೋಗಿಗಳು ಸಜೀವ ದಹನ

Photo credit: PTI
ಪುಣೆ : ಬುಧವಾರ ಬೆಳಿಗ್ಗೆ ಪುಣೆ ಬಳಿ ಖಾಸಗಿ ಕಂಪನಿಯೊಂದರ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಉದ್ಯೋಗಿಗಳು ಸಜೀವ ದಹನವಾಗಿದ್ದು, ಐದು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಿನಿ ಬಸ್ನ ಹಿಂಭಾಗದಲ್ಲಿರುವ ತುರ್ತು ನಿರ್ಗಮನ ದ್ವಾರವನ್ನು (emergency exit) ತೆರೆಯಲು ಸಾಧ್ಯವಾಗದ ಕಾರಣ ಸಾವು ನೋವು ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಿಂಪ್ರಿ ಚಿಂಚ್ವಾಡ್ ಪ್ರದೇಶದ ಹಿಂಜೇವಾಡಿಯಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆ ಸಮಯದಲ್ಲಿ ವಾಹನವು ವ್ಯೋಮಾ ಗ್ರಾಫಿಕ್ಸ್ನ 12 ಉದ್ಯೋಗಿಗಳನ್ನು ವಾರ್ಜೆಯಿಂದ ಹಿಂಜೆವಾಡಿಗೆ ಕರೆದೊಯ್ಯುತ್ತಿತ್ತು ಎಂದು ಅಧಿಕಾರಿ ಹೇಳಿದರು.
ಆರಂಭದಲ್ಲಿ, ಚಾಲಕನ ಪಾದದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹರಡುತ್ತಿದ್ದಂತೆ ಚಾಲಕ ವಾಹನವನ್ನು ನಿಧಾನಗೊಳಿಸಿದನು. ಅಪಾಯವನ್ನು ಅರಿತ ನಾಲ್ವರು ಉದ್ಯೋಗಿಗಳು ತಕ್ಷಣ ಮಿನಿಬಸ್ನಿಂದ ಇಳಿದರು. ವಾಹನದ ಹಿಂಭಾಗದಲ್ಲಿದ್ದವರು ಹಿಂಭಾಗದಲ್ಲಿರುವ ತುರ್ತು ನಿರ್ಗಮನದ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ನಿರ್ಗಮನ ಬಾಗಿಲು ತೆರೆಯದ ಕಾರಣ ಕೆಲವರು ವಾಹನದಲ್ಲೇ ಬಾಕಿಯಾದರು. ಅವರಲ್ಲಿ ನಾಲ್ವರು ಸುಟ್ಟು ಕರಕಲಾಗಿದ್ದು, ಇತರ ಐದು ಜನರಿಗೆ ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.