ತಾಯಿಯ ಸಾವಿನ ರಹಸ್ಯ ಬೇಧಿಸಲು ಪೊಲೀಸರಿಗೆ ನೆರವಾದ 4 ವರ್ಷದ ಬಾಲಕಿ ಬಿಡಿಸಿದ ಚಿತ್ರ

Photo credit: NDTV
ಝಾನ್ಸಿ (ಉತ್ತರ ಪ್ರದೇಶ): ನಾಲ್ಕು ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಯನ್ನು ತನ್ನ ತಂದೆ ಕೊಲೆ ಮಾಡಿದ್ದಾರೆ ಎಂದು ರೇಖಾಚಿತ್ರ ಬಿಡಿಸಿ ಪೊಲೀಸರಿಗೆ ವಿವರಿಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ಈ ಘಟನೆಯು ಝಾನ್ಸಿ ಜಿಲ್ಲೆಯ ಕೊತ್ವಾಲಿ ಪ್ರಾಂತ್ಯದ ಶಿವ್ ಪರಿವಾರ್ ಕಾಲನಿ ಪ್ರದೇಶದಲ್ಲಿ ನಡೆದಿದೆ. ಮೃತ ಮಹಿಳೆಯ ಕುಟುಂಬದ ಸದಸ್ಯರ ಪ್ರಕಾರ, 2019ರಲ್ಲಿ ಆಕೆ ಝಾನ್ಸಿಯ ನಿವಾಸಿ ಸಂದೀಪ್ ಬುಧೋಲಿಯ ಎಂಬಾತನನ್ನು ವಿವಾಹವಾಗಿದ್ದರು.
ಇತ್ತೀಚೆಗೆ 27 ವರ್ಷದ ಮಹಿಳೆಯೊಬ್ಬರು ನಿಗೂಢ ಸನ್ನಿವೇಶವೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಮ್ಮ ಪುತ್ರಿಯನ್ನು ಆಕೆಯ ಪತಿ ಹತ್ಯೆಗೈದಿದ್ದಾನೆ ಎಂದು ಮೃತ ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದರು. ಈ ಆರೋಪವನ್ನು ಮೃತ ಮಹಿಳೆಯ ನಾಲ್ಕು ವರ್ಷದ ಪುತ್ರಿ ಕೂಡಾ ಚಿತ್ರ ಬಿಡಿಸಿ ವಿವರಿಸುವ ಮೂಲಕ ಸಮರ್ಥಿಸಿದ್ದಾಳೆ ಎಂದು ವರದಿಯಾಗಿದೆ.
ತನ್ನ ತಾಯಿಯ ಸಾವಿನ ಕುರಿತು ಆಕೆಯ ನಾಲ್ಕು ವರ್ಷದ ಪುತ್ರಿ ಕೂಡಾ ಹೇಳಿಕೆ ನೀಡಿದ್ದು, ಚಿತ್ರ ಬಿಡಿಸುವ ಮೂಲಕ ತಾನೇನನ್ನು ಕಂಡೆ ಎಂಬುದನ್ನು ಪೊಲೀಸರಿಗೆ ವಿವರಿಸಿದ್ದಾಳೆ.
“ಅಪ್ಪ ಅಮ್ಮನನ್ನು ಹೊಡೆದು, ನಂತರ ನೇಣು ಬಿಗಿದರು. ಆತ ಆಕೆಯ ತಲೆಗೆ ಕಲ್ಲಿನಿಂದ ಹೊಡೆದು, ಆಕೆಯನ್ನು ಚೀಲದಲ್ಲಿ ತುರುಕಿ ಮನೆಯಿಂದ ಹೊರಗೆ ಎಸೆದರು” ಎಂದು ಹೇಳಿಕೆ ನೀಡಿರುವ ಬಾಲಕಿ, “ಹಿಂದಿನ ದಿನ ಅಪ್ಪ ಅಮ್ಮನನ್ನು ಹೆದರಿಸಲು ನೋಡಿದರು. ನೀನಾದರೂ ಅಮ್ಮನಿಗೆ ಹೊಡೆದರೆ ನಾನು ನಿನ್ನ ಕೈ ಮುರಿಯುತ್ತೇನೆ ಎಂದು ನಾನು ಆತನಿಗೆ ಹೇಳಿದೆ. ಆಕೆ ಸಾಯಲಿ ಎಂದು ಆತ ಆಕೆಗೆ ನಿತ್ಯ ಹೊಡೆಯುತ್ತಿದ್ದ ಹಾಗೂ ನನಗೂ ಅದನ್ನೇ ಮಾಡುತ್ತಿದ್ದ” ಎಂದು ಸಾಕ್ಷ್ಯ ನುಡಿದಿದ್ದಾಳೆ.
ವಿವಾಹದ ಸಂದರ್ಭದಲ್ಲಿ ನಮ್ಮ ಕುಟುಂಬವು ಆತನಿಗೆ 20 ಲಕ್ಷ ನಗದು ಹಾಗೂ ಉಡುಗೊರೆಗಳನ್ನು ವರದಕ್ಷಿಣೆಯನ್ನಾಗಿ ನೀಡಿತ್ತು. ಆದರೆ, ವಿವಾಹವಾದ ಬೆನ್ನಿಗೇ, ಮೃತ ಮಹಿಳೆಯ ಪತಿ ಹಾಗೂ ಆತನ ಕುಟುಂಬದ ಸದಸ್ಯರು ಹೆಚ್ಚುವರಿ ವರದಕ್ಷಿಣೆಯಾಗಿ ಕಾರು ನೀಡಬೇಕೆಂದು ಪೀಡಿಸತೊಡಗಿದರು ಎಂದು ಮೃತ ಮಹಿಳೆಯ ತಂದೆ ಸಂಜೀವ್ ತ್ರಿಪಾಠಿ ಆರೋಪಿಸಿದ್ದಾರೆ.
ಆದರೆ, ಈ ಬೇಡಿಕೆ ಈಡೇರದಿದ್ದಾಗ ಅವರು ನನ್ನ ಪುತ್ರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದರು ಎಂದೂ ಅವರು ಆಪಾದಿಸಿದ್ದಾರೆ. ಈ ಸಂಬಂಧ ಸಂಜೀವ್ ತ್ರಿಪಾಠಿ ಪೊಲೀಸರಿಗೆ ದೂರು ಸಲ್ಲಿಸಿದರೂ, ಅದು ರಾಜಿಯಲ್ಲಿ ಇತ್ಯರ್ಥವಾಗಿತ್ತು ಎನ್ನಲಾಗಿದೆ.
ಇದರ ಬೆನ್ನಿಗೇ ತನಿಖೆ ಕೈಗೊಂಡಿರುವ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಪತಿಯನ್ನು ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.