ಉದ್ಯೋಗ ಜಾಹೀರಾತುಗಳಿಂದ ತಾರತಮ್ಯದ ಮಾನದಂಡಗಳನ್ನು ಕೈಬಿಡುವಂತೆ ಭಾರತೀಯ ಏಜೆನ್ಸಿಗಳಿಗೆ ಫಾಕ್ಸ್ ಕಾನ್ ಆದೇಶ
ಚೆನ್ನೈ: ಉದ್ಯೋಗ ಜಾಹೀರಾತುಗಳಿಂದ ತಾರತಮ್ಯದ ಮಾನದಂಡಗಳನ್ನು ಕೈಬಿಡುವಂತೆ ಐಫೋನ್ ಪೂರೈಕೆದಾರ ಫಾಕ್ಸ್ಕಾನ್ ಕಂಪನಿ ಭಾರತದ ನೇಮಕಾತಿ ಏಜೆನ್ಸಿಗಳಿಗೆ ಸೂಚಿಸಿದೆ. ತಾರತಮ್ಯದ ನೇಮಕಾತಿ ಪದ್ಧತಿಗಳನ್ನು ಉಲ್ಲೇಖಿಸಿ ರಾಯಿಟರ್ಸ್(Reuters) ವರದಿಯ ನಂತರ ಈ ಬೆಳವಣಿಗೆ ನಡೆದಿದೆ.
Apple ಪೂರೈಕೆದಾರ ಫಾಕ್ಸ್ಕಾನ್ ಭಾರತದಲ್ಲಿನ ತನ್ನ ನೇಮಕಾತಿ ಸಂಸ್ಥೆಗಳಿಗೆ ಉದ್ಯೋಗ ಜಾಹೀರಾತುಗಳಿಂದ ವಯಸ್ಸು, ಲಿಂಗ ಮತ್ತು ವೈವಾಹಿಕ ಸ್ಥಿತಿಯ ಮಾನದಂಡಗಳನ್ನು ತೆಗೆದುಹಾಕಲು ಸೂಚನೆ ನೀಡಿದೆ.
ಚೆನ್ನೈ ಬಳಿಯ ಶ್ರೀಪೆರಂಬದೂರ್ ಐಫೋನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ವಿವಾಹಿತೆ ಎಂಬ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಲಾಗಿದೆ. ಆದರೆ, ಹೆಚ್ಚಿನ ಉತ್ಪಾದನಾ ಅವಧಿಯಲ್ಲಿ ಅಂತಹ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು ಎಂದು ರಾಯಿಟರ್ಸ್ ವರದಿಯು ಬಹಿರಂಗಪಡಿಸಿತ್ತು.
ಚೆನ್ನೈ ಸಮೀಪದ ಶ್ರೀಪೆರಂಬದೂರಿನಲ್ಲಿರುವ ಐಫೋನ್ ಫ್ಯಾಕ್ಟರಿಯಲ್ಲಿ ಸಾವಿರಾರು ಮಹಿಳೆಯರಿಗೆ ಉದ್ಯೋಗ ನೀಡುತ್ತಿರುವ ಫಾಕ್ಸ್ಕಾನ್ ಕಂಪೆನಿಗೆ ನೇಮಕಾತಿಯನ್ನು ಏಜೆನ್ಸಿಗಳು ಮಾಡುತ್ತದೆ. ಜನವರಿ 2023 ಮತ್ತು ಮೇ 2024ರ ನಡುವಿನ ಫಾಕ್ಸ್ಕಾನ್ನ ಭಾರತೀಯ ನೇಮಕಾತಿ ಜಾಹೀರಾತುಗಳನ್ನು ರಾಯಿಟರ್ಸ್ ಪರಿಶೀಲಿಸಿದೆ. ಈ ವೇಳೆ Apple ಮತ್ತು Foxconnನ ತಾರತಮ್ಯ ವಿರೋಧಿ ನೀತಿಗಳನ್ನು ಉಲ್ಲಂಘಿಸಲಾಗಿರುವುದು ಕಂಡು ಬಂದಿದೆ. ನಿರ್ದಿಷ್ಟ ವಯಸ್ಸಿನ ಅವಿವಾಹಿತ ಮಹಿಳೆಯರು ಮಾತ್ರ ಉದ್ಯೋಗಕ್ಕೆ ಅರ್ಹರಾಗಿದ್ದಾರೆ ಎಂದು ಜಾಹಿರಾತಿನಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ. ಈ ಕುರಿತು ವರದಿ ಪ್ರಕಟಣೆ ಬಳಿಕ ಕಂಪನಿಯ ನಿಯಮಗಳಿಗೆ ಅನುಗುಣವಾಗಿ ನೇಮಕಾತಿ ನಡೆಸಲು ಫಾಕ್ಸ್ ಕಾನ್ ಎಚ್ಆರ್ ಭಾರತೀಯ ನೇಮಕಾತಿ ಏಜೆನ್ಸಿಗಳಿಗೆ ಸೂಚಿಸಿದೆ.