ಗಣರಾಜ್ಯೋತ್ಸವದ ಮುಖ್ಯ ಅತಿಥಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಗೆ ಆಹ್ವಾನ

ಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ (PTI)
ಹೊಸದಿಲ್ಲಿ: ಮುಂದಿನ ವರ್ಷ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಮುಖ್ಯ ಅತಿಥಿಯನ್ನಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಅವರನ್ನು ಆಹ್ವಾನಿಸಲಾಗುತ್ತಿದೆ ಎಂದು ಈ ಬೆಳವಣಿಗೆಯ ಕುರಿತು ಮಾಹಿತಿ ಇರುವ ವ್ಯಕ್ತಿಗಳನ್ನು ಉಲ್ಲೇಖಿಸಿ PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದಕ್ಕೂ ಮುನ್ನ ಭಾರತ ಸರ್ಕಾರವು, ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರಿಗೆ ಮುಖ್ಯ ಅತಿಥಿಯ ಆಹ್ವಾನ ನೀಡಿತ್ತಾದರೂ, ಜನವರಿಯಲ್ಲಿ ತಾವು ದಿಲ್ಲಿಗೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಇದೀಗ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಅವರನ್ನು ಆಹ್ವಾನಿಸಲಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಜುಲೈ ತಿಂಗಳಲ್ಲಿ ಫ್ರಾನ್ಸ್ ನ ರಾಜಧಾನಿ ಪ್ಯಾರಿಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ಯಾಸ್ಟಿಲ್ಲೆ ದಿನಾಚರಣೆ(ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ)ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಅತಿಥಿಯಾಗಿ ಪಾಲ್ಗೊಂಡ ನಂತರ ಈ ಬೆಳವಣಿಗೆ ನಡೆದಿದೆ. ಬ್ಯಾಸ್ಟಿಲ್ಲೆ ದಿನಾಚರಣೆಯನ್ನು 1789ರಲ್ಲಿ ನಡೆದಿದ್ದ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಬ್ಯಾಸ್ಟಿಲ್ಲೆ ಬಂದೀಖಾನೆಯನ್ನು ಸ್ಫೋಟಿಸಿದ ಸ್ಮರಣಾರ್ಥ ಆಚರಿಸಲಾಗುತ್ತದೆ.
ಈ ವರ್ಷ ನಡೆದಿದ್ದ ಗಣರಾಜ್ಯೋತ್ಸವದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾ ಅಲ್-ಸಿಸಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರತಿ ವರ್ಷ ಭಾರತವು ವಿದೇಶಿ ನಾಯಕರಿಗೆ ಆಹ್ವಾನ ನೀಡುತ್ತದೆ. ಆದರೆ, ಕೋವಿಡ್-19 ಸಾಂಕ್ರಾಮಿಕ ವ್ಯಾಪಕವಾಗಿದ್ದ 2021 ಹಾಗೂ 2022ರಲ್ಲಿ ಮಾತ್ರ ಯಾವುದೇ ವಿದೇಶಿ ನಾಯಕರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿರಲಿಲ್ಲ.