ಅಪರಾಧಕ್ಕೆ ಪ್ರಾಯಶ್ಚಿತ ಕಾರ್ಯ ಮಾಡುತ್ತಿದ್ದ ಆರೋಪಿ ದೇಗುಲದಿಂದಲೇ ಬಂಧನ!
ಡೆಹ್ರಾಡೂನ್: ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆಯಡಿ ಸಾಲ ದೊರಕಿಸಿಕೊಡುವುದಾಗಿ ನಂಬಿಸಿ ಜನರನ್ನು ವಂಚಿಸುತ್ತಿದ್ದ 30 ವರ್ಷದ ಆರೋಪಿಯನ್ನು ಉತ್ತರಾಖಂಡ ಪೊಲೀಸರು ಶನಿವಾರ ದೇವಾಲಯವೊಂದರಿಂದ ಬಂಧಿಸಿದ್ದಾರೆ.
ಆರೋಪಿ ತಾನು ಮಾಡಿದ ಅಪರಾಧಕ್ಕೆ ದೇವಾಲಯದಲ್ಲಿ ಪ್ರಾಯಶ್ಚಿತ ಕಾರ್ಯವನ್ನು ನಡೆಸುತ್ತಿದ್ದಾಗ ವಿಶೇಷ ಕಾರ್ಯ ಪಡೆ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಮಾಜಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಈತ ನಕಲಿ ಕಾಲ್ ಸೆಂಟರ್ ಮೂಲಕ ಜನರನ್ನು ವಂಚಿಸುತ್ತಿದ್ದ ಎನ್ನಲಾಗಿದೆ.
ಉತ್ತರಪ್ರದೇಶದ ಸುಲ್ತಾನ್ ಪುರ ಮೂಲದ ದೀಪಕ್ ರಾಜ್ ಶರ್ಮಾ 2015ರಲ್ಲಿ ಡೆಹ್ರಾಡೂನ್ ಗೆ ಆಗಮಿಸಿದ ಬಳಿಕ ಆರಂಭದಲ್ಲಿ ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡಿದ್ದ. ಬಳಿಕ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. "ಅದೇ ವರ್ಷ ನಕಲಿ ಕಾಲ್ ಸೆಂಟರ್ ಸೇರುವ ಮೂಲಕ ಈತನ ಅಪರಾಧ ಜಗತ್ತಿನ ಪಯಣ ಆರಂಭವಾಗಿತ್ತು. ಅಮಾಯಕರಿಗೆ ಅವರ ಮನೆಗಳಲ್ಲಿ ಮೊಬೈಲ್ ಟವರ್ ಅಳವಡಿಸುವುದಾಗಿ ಭರವಸೆ ನೀಡಿ ಅವರಿಂದ ಹಣ ಕೀಳುತ್ತಿದ್ದ. ಈ ಆರೋಪದಲ್ಲಿ ಬಂಧಿತನಾಗಿದ್ದ ಈತ ಜೈಲು ಶಿಕ್ಷೆಗೂ ಗುರಿಯಾಗಿದ್ದ ಎಂದು ಎಸ್ ಟಿಎಫ್ ಎಸ್ಎಸ್ ಪಿ ಆಯುಷ್ ಅಗರ್ವಾಲ್ ಹೇಳಿದ್ದಾರೆ.
ಕೆಲ ತಿಂಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಶರ್ಮಾ 2022ರಲ್ಲಿ ಡೆಹ್ರಾಡೂನ್ ನ ಐಷಾರಾಮಿ ವಸಂತ ವಿಹಾರ್ ಪ್ರದೇಶದಲ್ಲಿ ಸ್ವಂತ ಕಾಲ್ ಸೆಂಟರ್ ಆರಂಭಿಸಿದ. "ದೇಶಾದ್ಯಂತ ಜನರಿಗೆ ಕರೆ ಮಾಡಲು ಕೆಲ ಯುವಕನ್ನು ನೇಮಕ ಮಾಡಿಕೊಂಡು ಜನರಿಗೆ ಪಿಎಂಎಂಎಲ್ಎಸ್ ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ" ಎಂದು ಅಗರ್ವಾಲ್ ವಿವರಿಸಿದ್ದಾರೆ. ನಗರದ ಪ್ರೇಮ್ ನಗರ ಪ್ರದೇಶದಲ್ಲಿ ಈತ ಮತ್ತೊಂದು ವಂಚನೆಯ ಕಾಲ್ ಸೆಂಟರ್ ನಡೆಸುತ್ತಿದ್ದ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಆಂಧ್ರದ ಜನತೆಯನ್ನು ವಂಚಿಸುವ ಸಲುವಾಗಿ ತೆಲುಗು ಮಾತನಾಡುವ ವ್ಯಕ್ತಿಗಳನ್ನೂ ಈತ ನೇಮಕ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.