ವೇತನಗಳನ್ನು ಹೆಚ್ಚಿಸಿಕೊಳ್ಳಲು ವಂಚನೆ: ಹಲವು ಭಾರತೀಯರು ಸೇರಿದಂತೆ 185 ಉದ್ಯೋಗಿಗಳನ್ನು ವಜಾಗೊಳಿಸಿದ ಆ್ಯಪಲ್
ಸಾಂದರ್ಭಿಕ ಚಿತ್ರ | PC : Apple
ಹೊಸದಿಲ್ಲಿ: ತಮ್ಮ ವೇತನಗಳನ್ನು ಹೆಚ್ಚಿಸಿಕೊಳ್ಳಲು ವಿತ್ತೀಯ ವಂಚನೆಯಲ್ಲಿ ತೊಡಗಿದ್ದ ಕ್ಯುಪರ್ಟಿನೊದಲ್ಲಿಯ ಕೇಂದ್ರ ಕಚೇರಿಯಲ್ಲಿಯ 185 ಉದ್ಯೋಗಿಗಳನ್ನು ಆ್ಯಪಲ್ ವಜಾಗೊಳಿಸಿದೆ. ವಜಾಗೊಂಡಿರುವ ಉದ್ಯೋಗಿಗಳ ಪೈಕಿ ಆರು ಜನರನ್ನು ಬೇ ಏರಿಯಾದ ಅಧಿಕಾರಿಗಳು ಹೆಸರಿಸಿದ್ದು,ಅವರ ವಿರುದ್ಧ ವಾರಂಟ್ಗಳನ್ನು ಹೊರಡಿಸಲಾಗಿದೆ. ಈ ಪೈಕಿ ಭಾರತೀಯರು ಯಾರೂ ಇಲ್ಲದಿದ್ದರೂ ವಜಾಗೊಂಡವರಲ್ಲಿ ಹೆಚ್ಚಿನವರು ಭಾರತೀಯರಾಗಿದ್ದು, ವಂಚನೆಯನ್ನು ನಡೆಸಲು ಅಮೆರಿಕದಲ್ಲಿಯ ಕೆಲವು ತೆಲುಗು ದತ್ತಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ʼಗ್ರೇಟ್ ಆಂಧ್ರʼದ ಇನ್ನೊಂದು ವರದಿಯು ಎತ್ತಿ ತೋರಿಸಿದೆ.
ತನ್ನ ಮ್ಯಾಚಿಂಗ್ ಗ್ರ್ಯಾಂಟ್ಸ್ ಕಾರ್ಯಕ್ರಮದ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಆ್ಯಪಲ್ ತನ್ನ ಬೇ ಏರಿಯಾ ಕಚೇರಿಗಳ ಹಲವಾರು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಲಾಸ್ ಏಂಜಲಿಸ್ನಲ್ಲಿಯ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಯನ್ನು ಉಲ್ಲೇಖಿಸಿ ಎನ್ಬಿಸಿ ವರದಿ ಮಾಡಿದೆ. ಈ ವಿಷಯ ಕುರಿತು ಆ್ಯಪಲ್ ಯಾವುದೇ ಅಧಿಕೃತ ಹೇಳಿಕೆಯನ್ನು ಹೊರಡಿಸಿಲ್ಲ ಮತ್ತು ಮಾಹಿತಿಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸುದ್ದಿಸಂಸ್ಥೆಗೆ ಸಾಧ್ಯವಾಗಿಲ್ಲ.
ಮ್ಯಾಚಿಂಗ್ ಗ್ರ್ಯಾಂಟ್ಸ್ ಕಾಯಕ್ರಮದಡಿ ಆ್ಯಪಲ್ ದತ್ತಿ ಸಂಸ್ಥೆಗಳಿಗೆ ತನ್ನ ಉದ್ಯೋಗಿಗಳು ನೀಡುವ ದೇಣಿಗೆಗಳಿಗೆ ಸಮಾನವಾಗಿ ತಾನೂ ದೇಣಿಗೆಗಳನ್ನು ನೀಡುತ್ತದೆ. ಇದು ಲಾಭರಹಿತ ಸಂಸ್ಥೆಗಳಿಗೆ ಉದ್ಯೋಗಿಗಳ ದತ್ತಿ ಕೊಡುಗೆಗಳನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಆ್ಯಪಲ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮವಾಗಿದೆ.
ವರದಿಯಾಗಿರುವ ಹಗರಣವು ಈ ಮ್ಯಾಚಿಂಗ್ ಗ್ರ್ಯಾಂಟ್ಸ್ ಕಾರ್ಯಕ್ರಮವನ್ನು ಕೇಂದ್ರೀಕರಿಸಿದೆ. ಕೆಲವು ಉದ್ಯೋಗಿಗಳು ಭಾರತೀಯ ಸಮುದಾಯಕ್ಕೆ ಸಂಬಂಧಿಸಿದ ಸಂಘಗಳು ಸೇರಿದಂತೆ ನಿರ್ದಿಷ್ಟ ಲಾಭೋದ್ದೇಶವಿಲ್ಲದ ಸಂಸ್ಥೆಗಳೊಂದಿಗೆ ಶಾಮೀಲಾಗಿ ಕಾರ್ಯಕ್ರಮದ ದುರ್ಲಾಭವನ್ನು ಪಡೆದುಕೊಳ್ಳಲು ಸುಳ್ಳು ದೇಣಿಗೆಗಳನ್ನು ನೀಡಿದ್ದರು ಎಂದು ಆರೋಪಗಳು ಸೂಚಿಸಿವೆ.
ಆರೋಪಗಳ ಪ್ರಕಾರ ಉದ್ಯೋಗಿಗಳು ಲಾಭೋದ್ದೇಶವಿಲ್ಲದ ಸಂಸ್ಥೆಗಳಿಗೆ ಹಣವನ್ನು ದೇಣಿಗೆ ನೀಡಿದ್ದರು ಮತ್ತು ಆ್ಯಪಲ್ ಇದಕ್ಕೆ ಸರಿಸಮಾನ ದೇಣಿಗೆಗಳನ್ನು ತಾನೂ ನೀಡಿತ್ತು. ಆದರೆ ಲಾಭೋದ್ದೇಶವಿಲ್ಲದ ಸಂಸ್ಥೆಗಳು ಮೂಲ ದೇಣಿಗೆಗಳನ್ನು ಉದ್ಯೋಗಿಗಳಿಗೆ ಮರಳಿಸಿದ್ದವು ಮತ್ತು ಆ್ಯಪಲ್ನ ಹೊಂದಾಣಿಕೆಯ ಕೊಡುಗೆಗಳನ್ನು ತಾವು ಉಳಿಸಿಕೊಂಡಿದ್ದವು. ಆರೋಪಗಳು ನಿಜವಾಗಿದ್ದರೆ ಇದು ಕಾರ್ಪೊರೇಟ್ ನೀತಿಗಳನ್ನು ಮಾತ್ರವಲ್ಲ,ಅಮೆರಿಕದ ತೆರಿಗೆ ಕಾನೂನುಗಳನ್ನೂ ಉಲ್ಲಂಘಿಸುತ್ತದೆ,ಏಕೆಂದರೆ ಉದ್ಯೋಗಿಗಳ ಸುಳ್ಳು ಹೇಳಿಕೆಗಳು ತೆರಿಗೆ ವಂಚನೆಯಾಗಿ ಪರಿಗಣಿಸಲ್ಪಡಬಹುದು.
ಸಾಂಟಾ ಕ್ಲಾರಾ ಕೌಂಟಿಯ ಜಿಲ್ಲಾ ಅಟಾರ್ನಿ ಕಚೇರಿಯ ಪ್ರಕಾರ ಆರು ಉದ್ಯೋಗಿಗಳು ಮೂರು ವರ್ಷಗಳಲ್ಲಿ ಲಾಭೋದ್ದೇಶವಿಲ್ಲದ ಎರಡು ಸಂಸ್ಥೆಗಳಾದ ಅಮೇರಿಕನ್ ಚೈನೀಸ್ ಇಂಟರ್ನ್ಯಾಷನಲ್ ಕಲ್ಚರ್ ಎಕ್ಸ್ಚೇಂಜ್ (ಎಸಿಐಸಿಇ) ಮತ್ತು ಹಾಫ್4ಕಿಡ್ಸ್ಗೆ ದೇಣಿಗೆಗಳನ್ನು ನೀಡಿರುವುದಾಗಿ ಸುಳ್ಳು ಹೇಳಿ ಆ್ಯಪಲ್ಗೆ ಸುಮಾರು 1,52,000 ಡಾಲರ್ಗಳನ್ನು ವಂಚಿಸಿದ್ದಾರೆ.
ಜಿಲ್ಲಾ ಅಟಾರ್ನಿ ಕಚೇರಿಯ ಪ್ರಕಾರ ರಿಂಗ್ಲೀಡರ್ ಎಂದು ಗುರುತಿಸಲಾಗಿರುವ ಕ್ವಾನ್ ಎಂಬಾತ ಹಾಪ್4ಕಿಡ್ಸ್ನ ಸಿಇಒ ಮತ್ತು ಎಸಿಐಸಿಇಗಾಗಿ ಅಕೌಂಟಂಟ್ ಆಗಿ ಕೆಲಸ ಮಾಡಿದ್ದ. ಈ ಹಗರಣವು ದೇಣಿಗೆಗಳನ್ನು ನೀಡಿದಂತೆ ಸೋಗು ಹಾಕಿದ್ದ ಉದ್ಯೋಗಿಗಳನ್ನು ಒಳಗೊಂಡಿದೆ ಮತ್ತು ಈ ದೇಣಿಗೆಗಳು ನಂತರ ಅವರಿಗೇ ವಾಪಸ್ ಆಗುತ್ತಿದ್ದವು. ಕ್ವಾನ್ ಆ್ಯಪಲ್ನ ಮ್ಯಾಚಿಂಗ್ ದೇಣಿಗೆಗಳನ್ನು ಉಳಿಸಿಕೊಳ್ಳುತ್ತಿದ್ದ ಮತ್ತು ಪ್ರತಿವಾದಿಗಳ ಟ್ಯಾಕ್ಸ್ ರಿಟರ್ನ್ಗಳಲ್ಲಿ ಈ ಕಾಲ್ಪನಿಕ ದೇಣಿಗೆಗಳನ್ನು ತೊಡೆದುಹಾಕುತ್ತಿದ್ದ, ತನ್ಮೂಲಕ ಕ್ಯಾಲಿಫೋರ್ನಿಯಾ ಸರಕಾರವನ್ನು ವಂಚಿಸಿದ್ದ.