ಉಚಿತ ಬಸ್ ಪ್ರಯಾಣ ದಿಲ್ಲಿ ಮಹಿಳೆಯರ ಉದ್ಯೋಗ, ಶಿಕ್ಷಣ ಅವಕಾಶಗಳನ್ನು ಹೆಚ್ಚಿಸಿದೆ: ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ (ಆಪ್)ದ ಸರಕಾರವು 2019ರಲ್ಲಿ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣ ಯೋಜನೆಯು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯರಕ್ಷಣೆ ಕ್ಷೇತ್ರಕ್ಕೆ ಕಾಲಿಡುವಲ್ಲಿ ಗಮನಾರ್ಹ ಕೊಡುಗೆ ನೀಡಿದೆ ಎಂದು ವರ್ಲ್ಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ (ಡಬ್ಲ್ಯುಆರ್ಐ) ಇಂಡಿಯಾ ಗುರುವಾರ ಬಿಡುಗಡೆಗೊಳಿಸಿದ ಸಂಶೋಧನಾ ಪ್ರಬಂಧವೊಂದು ಹೇಳಿದೆ.
ಉಚಿತ ಬಸ್ ಪ್ರಯಾಣ ಯೋಜನೆಯು ಸರಕಾರಿ ಬಸ್ಗಳಲ್ಲಿ ಪ್ರಯಾಣ ದರವನ್ನು ನೀಡದೇ ಪ್ರಯಾಣಿಸುವ ಅವಕಾಶವನ್ನು ಮಹಿಳೆಯರಿಗೆ ನೀಡುತ್ತದೆ.
ಈ ಯೋಜನೆಯು ಮುಖ್ಯವಾಗಿ ಕಡಿಮೆ ಆದಾಯದ ಕುಟುಂಬಗಳ ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ ಹಾಗೂ ಸಮೀಕ್ಷೆಯಲ್ಲಿ ಪಾಲ್ಗೊಂಡ ಅರ್ಧದಷ್ಟು ಮಹಿಳೆಯರು ತಿಂಗಳಿಗೆ ಕನಿಷ್ಠ 500 ರೂ. ಉಳಿಸಿದ್ದಾರೆ ಎಂದು ವರದಿ ತಿಳಿಸಿದೆ. ‘ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ: ದಿಲ್ಲಿಯಿಂದ ಕಲಿತ ಪಾಠಗಳು’ ಎಂಬ ಸಂಶೋಧನಾ ವರದಿಯನ್ನು ಡಬ್ಲ್ಯುಆರ್ಐ ಇಂಡಿಯಾದ ಸಂಶೋಧಕರಾದ ಹರ್ಷಿತಾ ಜಾಂಬ, ಅರವಿಂದ ದೇವರಾಜ್ ಮತ್ತು ಚೈತನ್ಯ ಕನುರಿ ತಯಾರಿಸಿದ್ದಾರೆ.
ತಂಡವು ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ 28 ಶೇಕಡದಷ್ಟು ಮಂದಿ ಕುಟುಂಬಗಳ ವಾರ್ಷಿಕ ಆದಾಯ 3 ಲಕ್ಷ ರೂ.ಗಿಂತ ಕಡಿಮೆ ಇರುವ ಆರ್ಥಿಕ ದುರ್ಬಲ ವರ್ಗಗಳಿಗೆ ಸೇರಿದವರು ಮತ್ತು 57 ಶೇಕಡ ಮಂದಿ ವಾರ್ಷಿಕ 6 ಲಕ್ಷ ರೂ.ಗಿಂತ ಕಡಿಮೆ ವರಮಾನ ಹೊಂದಿರುವ ಕುಟುಂಬಗಳಿಗೆ ಸೇರಿದವರಾಗಿದ್ದಾರೆ.
ರಾಜ್ಯ ಯೋಜನಾ ಆಯೋಗ ಇಲಾಖೆಯ ಅಂಕಿಸಂಖ್ಯೆಗಳ ಪ್ರಕಾರ, ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡ ಮಹಿಳೆಯರ ಪ್ರಮಾಣವು 2019-20ರಿಂದ 2022-23ರವರೆಗಿನ ಅವಧಿಯಲ್ಲಿ ಒಟ್ಟು ಪ್ರಯಾಣಿಕರ 33 ಶೇಕಡದಿಂದ 42 ಶೇಕಡಕ್ಕೆ ಏರಿಕೆ ಕಂಡಿತ್ತು ಎಂದು ಸಮೀಕ್ಷಾ ವರದಿ ಹೇಳಿದೆ.
‘‘ತಮ್ಮ ತಿಂಗಳ ಆದಾಯದ 8 ಶೇಕಡದಷ್ಟನ್ನು ಉಳಿಸಲು ಈ ಯೋಜನೆಯು ನೆರವಾಗಿದೆ ಎಂದು ಅವರು (ಸಮೀಕ್ಷೆಯಲ್ಲಿ ಪಾಲ್ಗೊಂಡ ಮಹಿಳೆಯರು) ಹೇಳಿದ್ದಾರೆ. ಉಚಿತ ಬಸ್ ಪ್ರಯಾಣವು ತಮ್ಮ ಕುಟುಂಬದ ಪುರುಷ ಸದಸ್ಯರ ಮೇಲಿನ ಮಹಿಳೆಯರ ಅವಲಂಬನೆಯನ್ನು ಕಡಿಮೆಗೊಳಿಸಿದೆ. ಇದರಿಂದಾಗಿ ಮಹಿಳೆಯರು ಒಬ್ಬಂಟಿಯಾಗಿ ಒಡಾಡಲು ಸಾಧ್ಯವಾಗಿದೆ’’ ಎಂದು ಸಂಶೋಧನಾ ವರದಿ ಅಭಿಪ್ರಾಯಪಟ್ಟಿದೆ.