ಭಾರತ ತೊರೆಯಲು ಮೋದಿ ಸರಕಾರದ ಒತ್ತಡ ಕಾರಣ: ಫ್ರೆಂಚ್ ಪತ್ರಕರ್ತೆ ಆರೋಪ
ವನೆಸ್ಸಾ ಡೌಗ್ನಾಕ್ (Photo:X/@CFWIJ)
ಹೊಸದಿಲ್ಲಿ: ತಮಗೆ ನೀಡಲಾಗಿರುವ ಸಾಗರೋತ್ತರ ಭಾರತೀಯ ನಾಗರಿಕತ್ವ ಕಾರ್ಡ್ ಅನ್ನು ರದ್ದುಗೊಳಿಸಲು ನೀಡಲಾಗಿರುವ ನೋಟಿಸ್ ಸಂಬಂಧಿತ ಕಾನೂನು ಪ್ರಕ್ರಿಯೆಯ ಪ್ರಗತಿಯನ್ನು ಕಾಯಲು ಸಾಧ್ಯವಿಲ್ಲದಿರುವುದರಿಂದ ಭಾರತ ತೊರೆಯುತ್ತಿದ್ದೇನೆ ಎಂದು ಶನಿವಾರ ಭಾರತವನ್ನು ತೊರೆದಿರುವ ಫ್ರೆಂಚ್ ಪತ್ರಕರ್ತೆ ವನೆಸ್ಸಾ ಡೌಗ್ನಾಕ್ ಹೇಳಿದ್ದಾರೆ.
"ನಾನು 25 ವರ್ಷದ ಹಿಂದೆ ವಿದ್ಯಾರ್ಥಿಯಾಗಿ ಬಂದು, 23 ವರ್ಷ ಪತ್ರಕರ್ತೆಯಾಗಿ ಕೆಲಸ ಮಾಡಿದ ಭಾರತವನ್ನು ಇಂದು ತೊರೆಯುತ್ತಿದ್ದೇನೆ. ನನ್ನ ವಿವಾಹವಾಗಿ, ನನ್ನ ಪುತ್ರ ಬೆಳೆದ ಈ ಸ್ಥಳವನ್ನು ನಾನು ನನ್ನ ಮನೆ ಎಂದು ಪರಿಗಣಿಸಿದ್ದೇನೆ" ಎಂದು ಫ್ರೆಂಚ್ ಪ್ರಕಟಣಾ ಸಂಸ್ಥೆಗಳಾದ ಲಾ ಕ್ರೋಯಿಕ್ಸ್ ಹಾಗೂ ಲೆ ಪಾಯಿಂಟ್ ಹಾಗೂ ಸ್ವಿಜರ್ಲೆಂಡ್ ದಿನಪತ್ರಿಕೆ ಲೆ ಟೆಂಪ್ಸ್ ಮತ್ತು ಬೆಲ್ಜಿಯಂ ದಿನಪತ್ರಿಕೆ ಲೆ ಸಾಯಿರ್ನ ದಕ್ಷಿಣ ಏಷ್ಯಾದ ವರದಿಗಾರ್ತಿಯಾದ ಡೌಗ್ನಾಕ್ ಪ್ರಕಟಣೆಯೊಂದರಲ್ಲಿ ಹೇಳಿಕೊಂಡಿದ್ದಾರೆ.
ನಾಗರಿಕತ್ವ ಕಾಯ್ದೆ 1955 ಹಾಗೂ ಅದರನ್ವಯ ಜಾರಿಯಲ್ಲಿರುವ ನಿಯಮ ಹಾಗೂ ನಿರ್ಬಂಧಗಳ ಪ್ರಕಾರ, ವಿಶೇಷ ಅನುಮತಿ ಪಡೆಯದೆ ಪತ್ರಕರ್ತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ನಿಮ್ಮ ಸಾಗರೋತ್ತರ ನಾಗರಿಕತ್ವ ಕಾರ್ಡ್ ಅನ್ನು ಯಾಕೆ ರದ್ದುಗೊಳಿಸಬಾರದು ಎಂದು ಕಳೆದ ತಿಂಗಳು ವಿದೇಶೀಯರ ಪ್ರಾಂತೀಯ ನೋಂದಣಿ ಕಚೇರಿಯು ಡೌಗ್ನಾಕ್ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು.
ಭಾರತ ತೊರೆಯುವುದು ನನ್ನ ಆಯ್ಕೆಯಾಗಿರಲಿಲ್ಲ ಎಂದು ಹೇಳಿರುವ ಡೌಗ್ನಾಕ್, ನನ್ನ ಲೇಖನಗಳು ಅವಹೇಳನಕಾರಿಯಾಗಿದ್ದು, ಭಾರತದ ಸಾರ್ವಭೌಮತೆ ಹಾಗೂ ಐಕ್ಯತೆಗೆ ಧಕ್ಕೆ ತರುವಂತಿವೆ ಎಂದು ಆರೋಪಿಸಿರುವ ಕೇಂದ್ರ ಸರಕಾರದ ಒತ್ತಡದಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.