ಬಂದರಿನಿಂದ ವಿಮಾನ ನಿಲ್ದಾಣವರೆಗೆ ಪ್ರಧಾನಿ ಮೋದಿ ನಿಯಂತ್ರಿಸುತ್ತಿದ್ದಾರೆ: ಖರ್ಗೆ
ಮಲ್ಲಿಕಾರ್ಜುನ ಖರ್ಗೆ | Photo: PTI
ಜೈಪುರ: ಪ್ರಧಾನಿ ನರೇಂದ್ರ ಮೋದಿಯವರು ಬಂದರುಗಳಿಂದ ಹಿಡಿದು ವಿಮಾನ ನಿಲ್ದಾಣಗಳವರೆಗೆ ಪ್ರತಿಯೊಂದನ್ನೂ ನಿಯಂತ್ರಿಸುತ್ತಿದ್ದಾರೆ ಜನರನ್ನು ಗುಲಾಮರನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸೋಮವಾರ ಆರೋಪಿಸಿದರು.
ನ.25ರ ವಿಧಾನಸಭಾ ಚುನಾವಣೆಗೆ ಮುನ್ನ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಅನೂಪಗಡದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಪಕ್ಷವು ಜನರ ಸಮಸ್ಯೆಗಳು ಮತ್ತು ಕಳವಳಗಳನ್ನು ನಿವಾರಿಸಲು ಹಾಗೂ ಅವರಿಗೆ ನೀಡಿರುವ ಭರವಸೆಗಳನ್ನು ಪೂರೈಸಲು ಕೆಲಸ ಮಾಡುತ್ತದೆ ಎಂದು ಹೇಳಿದರು.
‘ಬಹುಶಃ ಪ್ರಧಾನಿ ಕೂಡ ಈ ಪ್ರದೇಶದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ನಾವು ಪ್ರವಾಸ ಮಾಡಲು ಉದ್ದೇಶಿಸಿದಾಗ ನಮಗೆ ವಿಮಾನ ಹಾರಾಟಕ್ಕೆ ಅನುಮತಿ ದೊರೆಯುವುದಿಲ್ಲ. ಅಂದರೆ ಪ್ರತಿಯೊಂದೂ ಮೋದಿಯವರ ನಿಯಂತ್ರಣದಲ್ಲಿದೆ. ವಾಯು, ಭೂಮಿ, ಬಂದರುಗಳು ಮತ್ತು ವಿಮಾನ ನಿಲ್ದಾಣಗಳು ಎಲ್ಲವೂ ಅವರ ನಿಯಂತ್ರಣದಲ್ಲಿವೆ. ಅವರು ಜನರನ್ನು ಗುಲಾಮರನ್ನಾಗಿಸಲು ಶ್ರಮಿಸುತ್ತಿದ್ದಾರೆ’ ಎಂದು ಹೇಳಿದ ಖರ್ಗೆ ಹೆಚ್ಚು ವಿವರಿಸಲಿಲ್ಲ.
ಮೋದಿ ಸೋಮವಾರ ರಾಜಸ್ಥಾನದಲ್ಲಿ ಕೆಲವು ಚುನಾವಣಾ ರ್ಯಾಲಿಗಳಲ್ಲಿ ಮಾತನಾಡಿದರು.
‘ಅವರು ನಮ್ಮನ್ನು ಬೆದರಿಸಲು ಪ್ರಯತ್ನಿಸಬಹುದು, ಆದರೆ ನಾವು ಭಯ ಪಡುವವರಲ್ಲ. ನಾವು ಬಡವರಿಗಾಗಿ ಹೋರಾಡುತ್ತೇವೆ ಮತ್ತು ಅವರ ಕಷ್ಟಗಳನ್ನು ನಿವಾರಿಸುತ್ತೇವೆ ’ಎಂದು ಖರ್ಗೆ ಹೇಳಿದರು.
ರಾಜಸ್ಥಾನದ ಎಲ್ಲ 200 ವಿಧಾನಸಭಾ ಕ್ಷೇತ್ರಗಳಲ್ಲಿ ನ.25ರಂದು ಮತದಾನ ನಡೆಯಲಿದ್ದು,ಡಿ.3ರಂದು ಮತಎಣಿಕೆ ನಡೆಯಲಿದೆ.