ಹಣ್ಣುಗಳನ್ನು ಮಾಗಿಸಲು ನಿಷೇಧಿತ ಕ್ಯಾಲ್ಸಿಯಮ್ ಕಾರ್ಬೈಡ್ ಅನ್ನು ಬಳಸದಂತೆ ವರ್ತಕರಿಗೆ ಸೂಚಿಸಿದ FSSAI
ಮಾವಿನ ಹಣ್ಣಿಗೆ ಬಳಸುವ ಕ್ಯಾಲ್ಸಿಯಮ್ ಕಾರ್ಬೈಡ್ ನಿಂದ ಉಂಟಾಗುವ ಅಸಿಟೈಲ್ ಗ್ಯಾಸ್ ಅಪಾಯಕಾರಿ
Photo: Fssai.Gov.In
ಹೊಸದಿಲ್ಲಿ: ಹಣ್ಣುಗಳನ್ನು ಮಾಗಿಸಲು ನಿಷೇಧಿತ ಕ್ಯಾಲ್ಸಿಯಮ್ ಕಾರ್ಬೈಡ್ ರಾಸಾಯನಿಕವನ್ನು ಬಳಸದಂತೆ ವರ್ತಕರು ಹಾಗೂ ಆಹಾರ ವ್ಯಾಪಾರಿಗಳಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸೂಚಿಸಿದೆ.
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು, “ಹಣ್ಣು ಮಾಗಿಸುವಿಕೆ ಘಟಕಗಳನ್ನು ನಿರ್ವಹಿಸುತ್ತಿರುವ ವರ್ತಕರು, ಹಣ್ಣು ಮಾರಾಟಗಾರರು, ಆಹಾರ ವ್ಯಾಪಾರಿಗಳಿಗೆ ಹಣ್ಣುಗಳನ್ನು ತಾತ್ಕಾಲಿಕವಾಗಿ ಮಾಗಿಸುವಾಗ, ನಿರ್ದಿಷ್ಟವಾಗಿ ಮಾವಿನ ಋತುವಿನಲ್ಲಿ ನಿಷೇಧಿತ ಕ್ಯಾಲ್ಸಿಯಮ್ ಕಾರ್ಬೈಡ್ ಬಳಕೆಗೆ ಹೇರಲಾಗಿರುವ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಾತರಿ ಪಡಿಸಬೇಕು ಎಂದು ಸೂಚಿಸಲಾಗಿದೆ” ಎಂದು ಹೇಳಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಅಡಿ ಹಾಗೂ ಅದರನ್ವಯ ಜಾರಿಯಲ್ಲಿರುವ ನಿಯಮಾವಳಿಗಳು ಹಾಗೂ ನಿರ್ಬಂಧಗಳ ಪ್ರಕಾರ, ಇಂತಹ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಇಲಾಖೆಗಳು ವಿಚಕ್ಷಣೆಯಿಂದ ಇರಬೇಕು ಹಾಗೂ ಗಂಭೀರ ಕ್ರಮದೊಂದಿಗೆ ಕಠಿಣವಾಗಿ ವರ್ತಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಸಲಹೆ ನೀಡಿದೆ.
ಮಾವಿನ ಹಣ್ಣುಗಳನ್ನು ಮಾಗಿಸಲು ಸಾಮಾನ್ಯವಾಗಿ ಬಳಸಲಾಗುವ ಕ್ಯಾಲ್ಸಿಯಮ್ ಕಾರ್ಬೈಡ್ ನಿಂದ ಅಸಿಟೈಲ್ ಗ್ಯಾಸ್ ಹೊರ ಹೊಮ್ಮುತ್ತದೆ. ಈ ಗಾಳಿಯು ಆರ್ಸೆನಿಕ್ ಹಾಗೂ ಫಾಸ್ಫರಸ್ ನಂಥ ಹಾನಿಕಾರಕ ರಾಸಾಯನಿಕ ಅವಶೇಷಗಳನ್ನು ಹೊಂದಿರುತ್ತದೆ.
“ಈ ರಾಸಾಯನಿಕಗಳು ತಲೆ ಸುತ್ತುವಿಕೆ, ಪದೇ ಪದೇ ಬಾಯಾರಿಕೆ, ಉರಿ, ದೌರ್ಬಲ್ಯ, ನುಂಗುವಿಕೆ ಸಮಸ್ಯೆ, ವಾಂತಿ ಹಾಗೂ ಚರ್ಮದ ಹುಣ್ಣುಗಳಂಥ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ” ಎಂದೂ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರವು ಎಚ್ಚರಿಸಿದೆ. ಇದರೊಂದಿಗೆ, ಹಣ್ಣು ಮಾಗಿಸುವ ಕಾರ್ಯ ನಿರ್ವಹಿಸುವವರಿಗೂ ಅಸಿಟೈಲ್ ಗ್ಯಾಸ್ ಅಪಾಯಕಾರಿಯಾಗಿದೆ.