ಎ1 & ಎ2 ಹಾಲಿನ ಲೇಬಲ್ ಸ್ಥಗಿತಕ್ಕೆ ಎಫ್ ಎಸ್ ಎಸ್ ಎಐ ಸೂಚನೆ
ಸಾಂದರ್ಭಿಕ ಚಿತ್ರ PC: istockphoto.com
ಹೊಸದಿಲ್ಲಿ: ಇ-ಕಾಮರ್ಸ್ ಸಂಸ್ಥೆಗಳು ಸೇರಿದಂತೆ ಎಲ್ಲ ಆಹಾರ ವ್ಯವಹಾರ ನಡೆಸುವ ಸಂಸ್ಥೆಗಳು ತಾವು ಮಾರಾಟ ಮಾಡುವ ಹಾಲಿನ ಪ್ಯಾಕೆಟ್ ಗಳ ಮೇಲೆ ನಮೂದಿಸುವ ಎ1 ಹಾಲು ಅಥವಾ ಎ2 ಹಾಲು ಎಂಬ ಬರಹವನ್ನು ಕಿತ್ತುಹಾಕುವಂತೆ ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ ಸೂಚನೆ ನೀಡಿದೆ. ಇಂಥ ಲೇಬಲ್ ಗಳು ತಪ್ಪುದಾರಿಗೆ ಎಳೆಯುವಂಥದ್ದು ಎಂದು ಅಭಿಪ್ರಾಯಪಟ್ಟಿದೆ. ಈ ಕ್ಲೇಮ್ ಗಳು ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆ-2006ಕ್ಕೆ ಅನುಗುಣವಾಗಿಲ್ಲ ಎಂದು ಎಫ್ ಎಸ್ ಎಸ್ ಎಐ ಸ್ಪಷ್ಟಪಡಿಸಿದೆ.
ಈ ಸಮಸ್ಯೆಯನ್ನು ಪರಿಶೀಲಿಸಿದ ಬಳಿಕ ಎ1 ಮತ್ತು ಎ2 ಎಂಬ ವ್ಯತ್ಯಾಸವನ್ನು ಹಾಲಿನಲ್ಲಿರುವ ಬೆಟಾ-ಕೆಸೀನ್ ಪ್ರೊಟೀನ್ನ ಸಂರಚನೆಗೆ ಅನುಗುಣವಾಗಿ ಮಾಡಲಾಗುತ್ತಿದೆ. ಆದರೆ ಎಫ್ ಎಸ್ ಎಸ್ ಎಐನ ಪ್ರಸಕ್ತ ನಿಬಂಧನೆಗಳು ಈ ವ್ಯತ್ಯಾಸವನ್ನು ಮಾನ್ಯ ಮಾಡುವುದಿಲ್ಲ ಎಂದು ಇತ್ತೀಚಿನ ಆದೇಶದಲ್ಲಿ ಹೇಳಿದೆ.
ಬೆಟಾ ಕೆಸಿನ್ ಹಾಲಿನಲ್ಲಿ ಸಮೃದ್ಧವಾಗಿರುವ ಎರಡನೇ ಅತ್ಯಧಿಕ ಪ್ರಮಾಣದ ಪ್ರೊಟೀನ್ ಆಗಿದೆ ಹಾಗೂ ಇದು ಅದ್ಭುತ ಪೌಷ್ಟಿಕ ಸಮತೋಲನದ ಅಮಿನೊ ಆಮ್ಲವಾಗಿದೆ. ಇ-ಕಾಮರ್ಸ್ ಪ್ಲಾಟ್ ಫಾರಂಗಳು ಇಂಥ ಕ್ಲೇಮ್ ಗಳನ್ನು ತಮ್ಮ ಉತ್ಪನ್ನಗಳು ಹಾಗೂ ವೆಬ್ ಸೈಟಿನಿಂದಲೂ ಕಿತ್ತುಹಾಕುವಂತೆ ಸೂಚಿಸಲಾಗಿದೆ. ಈಗಾಗಲೇ ಮುದ್ರಣಗೊಂಡಿರುವ ಲೇಬಲ್ ಗಳನ್ನು ಮುಗಿಸಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ಮುಂದೆ ಯಾವುದೇ ಕಾರಣಕ್ಕೆ ಇದನ್ನು ವಿಸ್ತರಿಸುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಎ1 ಹಾಗೂ ಎ2 ಹಾಲಿನ ಬೆಟಾ ಕೆಸಿನ್ ಪ್ರೊಟೀನ್ ಸಂಯೋಜನೆಯಲ್ಲಿ ಭಿನ್ನತೆ ಇದ್ದು, ಇದು ಹಸುವಿನ ತಳಿಯ ಆಧಾರದಲ್ಲಿ ಬದಲಾವಣೆಯಾಗುತ್ತದೆ.