ʼರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ದೋಷಪೂರಿತವಾಗಿತ್ತುʼ; ಕಾಂಗ್ರೆಸ್ ಆರೋಪ
NHRC ಅಧ್ಯಕ್ಷರಾಗಿ ನ್ಯಾ. ವಿ ರಾಮಸುಬ್ರಮಣಿಯನ್ ನೇಮಕಕ್ಕೆ ಕಾಂಗ್ರೆಸ್ ವಿರೋಧ
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ | PC : ANI
ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ(NHRC) ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಆದರೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ʼಪೂರ್ವ ನಿರ್ಧಾರಿತ ಮತ್ತು ದೋಷಪೂರಿತವಾಗಿದೆʼ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಆಯ್ಕೆ ಪ್ರಕ್ರಿಯೆಯು ದೋಷಪೂರಿತವಾಗಿತ್ತು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಯ್ಕೆಯ ವೇಳೆ ಪರಸ್ಪರ ಸಮಾಲೋಚನೆ ಮತ್ತು ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳುವ ಸಂಪ್ರದಾಯವನ್ನು ನಿರ್ಲಕ್ಷಿಸಲಾಗಿದೆ. ಆಯ್ಕೆ ಸಮಿತಿಯ ವಿಶ್ವಾಸಾರ್ಹತೆಗೆ ನಿರ್ಣಾಯಕವಾಗಿರುವ ನ್ಯಾಯೋಚಿತತೆ ಮತ್ತು ನಿಷ್ಪಕ್ಷಪಾತದ ತತ್ವಗಳನ್ನು ದುರ್ಬಲಗೊಳಿಸಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಮತ್ತು ನ್ಯಾಯಮೂರ್ತಿ ಕೆಎಂ ಜೋಸೆಫ್ ಅವರ ಹೆಸರನ್ನು ಪ್ರಸ್ತಾಪಿಸಲಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.
ಎನ್ ಎಚ್ ಆರ್ ಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿ ಸಭೆಯು ಡಿಸೆಂಬರ್ 18ರಂದು ಸಂಸತ್ ಭವನದಲ್ಲಿ ನಡೆಯಿತು. ಸಮಾಲೋಚನೆಯ ಒಮ್ಮತದ ನಿರ್ಧಾರದ ಮೇಲೆ ಆಯ್ಕೆ ಮಾಡುವ ಬದಲು ಬಹುಮತವನ್ನು ಆಧರಿಸಿ ಹೆಸರುಗಳನ್ನು ಅಂತಿಮಗೊಳಿಸಿದೆ, ಸಭೆಯಲ್ಲಿ ಎತ್ತಿದ ನ್ಯಾಯಸಮ್ಮತ ವಿಚಾರಗಳನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಎನ್ ಎಚ್ ಆರ್ ಸಿ ಮುಖ್ಯಸ್ಥರನ್ನು ಆಯ್ಕೆ ಮಾಡುವ ಸಮಿತಿಗೆ ಪ್ರಧಾನಿ ನೇತೃತ್ವ ವಹಿಸುತ್ತಾರೆ. ಲೋಕಸಭೆಯ ಸ್ಪೀಕರ್, ಗೃಹ ಸಚಿವರು, ಲೋಕಸಭೆಯ ವಿರೋಧ ಪಕ್ಷದ ನಾಯಕ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಸಭೆಯ ಸ್ಪೀಕರ್ ಸಮಿತಿಯ ಭಾಗವಾಗಿದ್ದಾರೆ.