ಜಿ20 ಶೃಂಗಸಭೆ: 78 ವಾದ್ಯ ಸಂಗೀತಕಾರರಿಂದ ವಿಶ್ವ ನಾಯಕರ ಮುಂದೆ ಕಲಾ ಪ್ರದರ್ಶನ
PHOTO: PTI
ಹೊಸದಿಲ್ಲಿ: ಇಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿರುವ ವಿಶ್ವ ನಾಯಕರು ಭಾರತದ ಶ್ರೀಮಂತ ಸಂಗೀತ ಪರಂಪರೆಯನ್ನು ಸವಿಯಲಿದ್ದಾರೆ. 78 ಸಾಂಪ್ರದಾಯಿಕ ವಾದ್ಯ ಸಂಗೀತಕಾರರ ಮೇಳವು ಈ ನಾಯಕರ ಮುಂದೆ ಶಾಸ್ತ್ರೀಯ ಮತ್ತು ಸಮಕಾಲೀನ ಸಂಗೀತದ ವಿವಿಧ ಶೈಲಿಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ.9ರಂದು ಜಿ20 ನಾಯಕರ ಗೌರವಾರ್ಥ ಏರ್ಪಡಿಸಿರುವ ಸಾಂಪ್ರದಾಯಕ ಭೋಜನಕೂಟದಲ್ಲಿ ‘ಗಂಧರ್ವ ಆಟೋದ್ಯಂ’ ಗುಂಪು ‘ಭಾರತ ವಾದ್ಯ ದರ್ಶನಂ-ಭಾರತದ ಸಂಗೀತ ಪಯಣ’ ಕಾರ್ಯಕ್ರಮವನ್ನು ಪ್ರದರ್ಶಿಸಲಿದೆ.
ಪ್ರದರ್ಶನವು ಸಂತೂರ್, ಸಾರಂಗಿ, ಜಲತರಂಗ್ ಮತ್ತು ಶೆಹನಾಯಿಯಂತಹ ಭಾರತೀಯ ಶಾಸ್ತ್ರೀಯ ಸಂಗೀತ ಉಪಕರಣಗಳನ್ನು ಒಳಗೊಂಡಿದೆ. ಪ್ರದರ್ಶನದ ಪರಿಕಲ್ಪನೆ ಸಂಗೀತ ನಾಟಕ ಅಕಾಡಮಿಯದಾಗಿದೆ. ಹಿಂದುಸ್ಥಾನಿ, ಕರ್ನಾಟಕ ಜಾನಪದ ಮತ್ತು ಸಮಕಾಲೀನ ಸಂಗೀತ ಇವು ಈ ವಾದ್ಯ ಸಂಗೀತಕಾರರು ಪ್ರಸ್ತುತ ಪಡಿಸಲಿರುವ ಪ್ರಮುಖ ಶೈಲಿಗಳಲ್ಲಿ ಸೇರಿವೆ. ಗುಂಪು ದೇಶಾದ್ಯಂತದಿಂದ 34 ಹಿಂದುಸ್ಥಾನಿ ಸಂಗೀತ, 18 ಕರ್ನಾಟಕ ಸಂಗೀತ ಮತ್ತು 26 ಜಾನಪದ ಸಂಗೀತ ವಾದ್ಯಗಳನ್ನು ಒಳಗೊಂಡಿದೆ.
78 ಕಲಾಕಾರರಲ್ಲಿ 11 ಮಕ್ಕಳು, 13 ಮಹಿಳೆಯರು, ಆರು ಭಿನ್ನ ಸಾಮರ್ಥ್ಯದ ಕಲಾವಿದರು, 26 ಯುವಜನರು ಮತ್ತು 22 ವೃತ್ತಿಪರರು ಸೇರಿದ್ದಾರೆ. ಈ ಕಲಾವಿದರು ತಮ್ಮ ಪ್ರದೇಶದ ಸಾಂಪ್ರದಾಯಕ ಉಡುಪಿನೊಂದಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ.