ಮಾರ್ಚ್ ವೇಳೆಗೆ ರಸ್ತೆ ಅಪಘಾತ ಗಾಯಾಳುಗಳಿಗೆ 1.5 ಲಕ್ಷ ರೂ.ನಗದುರಹಿತ ಚಿಕಿತ್ಸಾ ಸೌಲಭ್ಯ: ಗಡ್ಕರಿ
ನಿತಿನ್ ಗಡ್ಕರಿ | PC : PTI
ಹೊಸದಿಲ್ಲಿ : ಸರಕಾರವು ಮಾರ್ಚ್ ವೇಳೆಗೆ ರಸ್ತೆ ಅಪಘಾತಗಳಲ್ಲಿ ಗಾಯಾಳುಗಳಿಗೆ ನಗದುರಹಿತ ಚಿಕಿತ್ಸೆಯನ್ನು ಒದಗಿಸುವ ರಾಷ್ಟ್ರವ್ಯಾಪಿ ಯೋಜನೆಯನ್ನು ಆರಂಭಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಬುಧವಾರ ಇಲ್ಲಿ ಪ್ರಕಟಿಸಿದರು.
ಈ ಯೋಜನೆಯಡಿ ಗಾಯಾಳುಗಳು ಅಪಘಾತದ ಬಳಿಕ ಏಳು ದಿನಗಳ ಕಾಲ 1.5 ಲಕ್ಷ ರೂ.ವರೆಗೆ ನಗದುರಹಿತ ಚಿಕಿತ್ಸೆಯನ್ನು ಪಡೆಯಲಿದ್ದಾರೆ. ಯೋಜನೆಯು ಎಲ್ಲ ರೀತಿಗಳ ರಸ್ತೆಗಳಲ್ಲಿ ಮೋಟರ್ ವಾಹನಗಳಿಂದ ಉಂಟಾಗುವ ಅಪಘಾತಗಳನ್ನು ಒಳಗೊಂಡಿರಲಿದೆ. ಅಪಘಾತ ಸಂಭವಿಸಿದ 24 ಗಂಟೆಗಳಲ್ಲಿ ಪೋಲಿಸರಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ.
ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಮೃತರ ಕುಟುಂಬಕ್ಕೆ ಎರಡು ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು ಎಂದೂ ಗಡ್ಕರಿ ಪ್ರಕಟಿಸಿದರು.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ಎಚ್ಎ)ವು ಪೋಲಿಸ್,ಆಸ್ಪತ್ರೆಗಳು ಮತ್ತು ರಾಜ್ಯ ಆರೋಗ್ಯ ಏಜೆನ್ಸಿಗಳೊಂದಿಗೆ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆಯನ್ನು ನಡೆಸಲಿದೆ.
ಯೋಜನೆಯು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಇ-ಡಿಟೇಲ್ಡ್ ಆ್ಯಕ್ಸಿಡೆಂಟ್ ಆ್ಯಪ್ನ್ನು ಎನ್ಎಚ್ಎದ ಟ್ರಾನ್ಸ್ಯಾಕ್ಷನ್ ಮ್ಯಾನೇಜ್ಮೆಂಟ್ ಸಿಸ್ಟಮ್ ಜೊತೆ ಸಂಯೋಜಿಸುವ ಐಟಿ ವೇದಿಕೆಯ ಮೂಲಕ ಕಾರ್ಯ ನಿರ್ವಹಿಸಲಿದೆ.
2024, ಮಾ.14ರಂದು ಚಂಡಿಗಡದಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಬಳಿಕ ಇತರ ಆರು ರಾಜ್ಯಗಳಿಗೆ ವಿಸ್ತರಣೆಗೊಂಡಿದೆ.
ಅಪಘಾತದ ಬಳಿಕ ನಿರ್ಣಾಯಕ ‘ಗೋಲ್ಡನ್ ಅವರ್’ನಲ್ಲಿ ಸಕಾಲಿಕ ವೈದ್ಯಕೀಯ ನೆರವನ್ನು ಒದಗಿಸುವುದು ಯೋಜನೆಯ ಗುರಿಯಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಡ್ಕರಿ, ಪೈಲಟ್ಗಳಿಗೆ ಇರುವಂತೆ ವಾಣಿಜ್ಯ ವಾಹನಗಳ ಚಾಲಕರಿಗೂ ಕೆಲಸದ ಅವಧಿಯನ್ನು ಕ್ರಮಬದ್ಧಗೊಳಿಸಲು ನೀತಿಗಳನ್ನು ರೂಪಿಸುವುದು ಸೇರಿದಂತೆ ರಸ್ತೆ ಸುರಕ್ಷತೆ ಸವಾಲುಗಳನ್ನು ಎದುರಿಸಲು ಕೈಗೊಳ್ಳಲಾಗಿರುವ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ಚಾಲಕರು ವಿಶ್ರಾಂತಿಯಿಲ್ಲದೆ ಗಂಟೆಗಟ್ಟಲೆ ಕಾಲ ವಾಹನಗಳನ್ನು ಚಲಾಯಿಸುವುದರಿಂದ ಆಯಾಸಗೊಳ್ಳುತ್ತಾರೆ ಮತ್ತು ಇದು ಮಾರಣಾಂತಿಕ ಅಪಘಾತಗಳಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ.
ದೇಶದಲ್ಲಿ 22 ಲಕ್ಷ ಚಾಲಕರ ಕೊರತೆಯಿದೆ ಎನ್ನುವುದನ್ನು ಗಡ್ಕರಿ ಈ ಸಂದರ್ಭದಲ್ಲಿ ಒಪ್ಪಿಕೊಂಡರು.
ಜ.6 ಮತ್ತು 7ರಂದು ಎರಡು ದಿನಗಳ ಕಾರ್ಯಾಗಾರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ರಸ್ತೆ ಸಾರಿಗೆಯನ್ನು ಸುಧಾರಿಸಲು ಪ್ರಮುಖ ಕ್ರಮಗಳ ಬಗ್ಗೆ ಚರ್ಚಿಸಿದೆ.
ದೇಶಾದ್ಯಂತ ವಾಹನ ಚಾಲನಾ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುವ ಯೊಜನೆಯನ್ನೂ ಗಡ್ಕರಿ ಪ್ರಕಟಿಸಿದರು. ಹೊಸ ನಿಯಮಗಳ ಮೂಲಕ ಇ-ರಿಕ್ಷಾ ಸುರಕ್ಷತೆಯನ್ನು ಹೆಚ್ಚಿಸುವ ಮಹತ್ವಕ್ಕೂ ಅವರು ಒತ್ತು ನೀಡಿದರು.