ಗಾಂಧೀಜಿ ಆದರ್ಶಗಳು ದೇಶದ ಜನತೆಗೆ ಸದಾ ಸ್ಫೂರ್ತಿದಾಯಕ: ಮೋದಿ
ನರೇಂದ್ರ ಮೋದಿ | PTI
ಹೊಸದಿಲ್ಲಿ: ಮಹಾತ್ಮಾಗಾಂಧೀಜಿಯವರ 155ನೇ ಜನ್ಮದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ರಾಷ್ಟ್ರದ ಜನತೆಗೆ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ರಾಷ್ಟ್ರಪಿತನ ಆದರ್ಶಗಳು ದೇಶದ ಜನತೆಗೆ ಸದಾ ಸ್ಪೂರ್ತಿಯಾಗಿ ಉಳಿಯಲಿವೆ ಎಂದು ಹೇಳಿದ್ದಾರೆ.
ಮಹಾತ್ಮಾಗಾಂಧೀಜಿಯವಪ ಬದುಕು ಹಾಗೂ ಆದರ್ಶಗಳು ಸತ್ಯ, ಸೌಹಾರ್ದತೆ ಮತ್ತು ಸಮಾನತೆಯನ್ನು ಆಧರಿಸಿದ್ದು, ದೇಶವಾಸಿಗಳಿಗೆ ಸದಾ ಸ್ಫೂರ್ತಿಯಾಗಿ ಉಳಿಯಲಿದೆ ಎಂದು ಪ್ರಧಾನಿ ನರೇಂದ್ರ
ಮೋದಿ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
(ರಾಷ್ಟ್ರಪತಿ ದ್ರೌಪದಿ ಮುರ್ಮು | PC : PTI)
ಗಾಂಧೀಜಿ ಬದುಕು ಮಾನವಕುಲಕ್ಕೊಂದು ವಿಶಿಷ್ಟ ಸಂದೇಶ: ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶಕ್ಕೆ ನೀಡಿದ ಗಾಂಧಿ ಜಯಂತಿ ಸಂದೇಶದಲ್ಲಿ, ಸತ್ಯ ಹಾಗೂ ಅಹಿಂಸೆಯ ಕಟ್ಟಾ ಅನುಯಾಯಿಯಾದ ಬಾಪೂಜಿ ಅವರ ಬದುಕು ಸಮಸ್ತ ಮಾನವಕುಲಕ್ಕೊಂದು ವಿಶಿಷ್ಟ ಸಂದೇಶವಾಗಿದೆ. ಶಾಂತಿ ಹಾಗೂ ಸಹಕಾರದ ಪಥವನ್ನು ಅನುಸರಿಸಲು ಅವರು ನಮ್ಮನ್ನು ಪ್ರೇರೇಪಿಸಿದ್ದಾರೆ. ಅಸ್ಪಶತೆ, ಅನಕ್ಷರತೆ, ನೈರ್ಮಲ್ಯದ ಕೊರತೆ ಮತ್ತಿತರ ಸಾಮಾಜಿಕ ಪಿಡುಗುಗಳನ್ನು ತೊಲಗಿಸಲು ಗಾಂಧೀಜಿಯವರು ಅಭಿಯಾನವನ್ನೇ ನಡೆಸಿದ್ದರು ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಅವಿರತವಾಗಿ ಶ್ರಮಿಸಿದ್ದರು ಎಂದು ಹೇಳಿದ್ದಾರೆ.
ಮಹಾತ್ಮಾ ಗಾಂಧಿ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ಗಾಂದಿ ಮತ್ತಿತರ ಮುಖಂಡರು ಹೊಸದಿಲ್ಲಿಯ ರಾಜ್ಘಾಟ್ನಲ್ಲಿರುವ ರಾಷ್ಟ್ರಪಿತನ ಸಮಾಧಿಗೆ ಭೇಟಿ ನೀಡಿ, ಪುಷ್ಪನಮನ ಸಲ್ಲಿಸಿದರು.