ದಿಲ್ಲಿಯ ಹೋಟೆಲೊಂದರಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ: ಐವರು ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
ಡೆಹ್ರಾಡೂನ್: ಹಲ್ದ್ವಾನಿಯ ಖ್ಯಾತ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕಿಯೊಬ್ಬಳ ಮೇಲೆ ಮಹಾರಾಷ್ಟ್ರದ ಮೂವರು ಯುವಕರು ಸೇರಿದಂತೆ ಒಟ್ಟು ಐದು ಮಂದಿ ದಿಲ್ಲಿಯ ಹೋಟೆಲೊಂದರಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಎಲ್ಲ ಐದು ಮಂದಿ ಯುವಕರು ಸ್ನೇಹಿತರು ಎಂದು ಹೇಳಲಾಗಿದ್ದು, ಅವರನ್ನೆಲ್ಲ ಪೊಲೀಸರು ದಿಲ್ಲಿಯಿಂದ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಾಯ್ ಗಢ ನಿವಾಸಿಗಳಾದ ಸಂದೇಶ್ ಚಿಪ್ಲಾಕರ್ (25), ರೋಷನ್ ಪಾಟೀಲ್ (29), ಯೋಗೇಶ್ ನಾಯ್ಕ್ (34) ಹಾಗೂ ದಿಲ್ಲಿ ನಿವಾಸಿಗಳಾದ ಆಶಿಶ್ ಅಗರ್ಕರ್ (30) ಹಾಗೂ ಸಾಹಿಲ್ ಕುಮಾರ್ (24) ಎಂದು ಗುರುತಿಸಲಾಗಿದೆ.
“ಅಕ್ಟೋಬರ್ 4ರಂದು ಶಾಲೆಗೆ ತೆರಳಿದ್ದ ನನ್ನ ಪುತ್ರಿಯು, ನಂತರ ನಾಪತ್ತೆಯಾಗಿದ್ದಾಳೆ” ಎಂದು ಸಂತ್ರಸ್ತ ಬಾಲಕಿಯ ತಂದೆಯು ಪೊಲೀಸರಿಗೆ ದೂರು ಸಲ್ಲಿಸಿದ ನಾಲ್ಕು ದಿನದ ನಂತರ, 15 ವರ್ಷದ ಆ ಬಾಲಕಿ ದಿಲ್ಲಿಯಲ್ಲಿ ಪತ್ತೆಯಾಗಿದ್ದಾಳೆ.
“ವಿಚಾರಣೆಯ ಸಂದರ್ಭದಲ್ಲಿ ಬಾಲಕಿಯು ಅಕ್ಟೋಬರ್ 4ರಂದು ಹಲ್ದ್ವಾನಿಯಿಂದ ದಿಲ್ಲಿಗೆ ರೈಲಿನಲ್ಲಿ ಪ್ರಯಾಣಿಸಿರುವುದು ತಿಳಿದು ಬಂದಿದೆ. ಬಾಲಕಿಯ ಮೊಬೈಲ್ ಲೊಕೇಶನ್ ಆಧರಿಸಿ ಆಕೆಯ ಚಲನವಲನಗಳನ್ನು ಪತ್ತೆ ಹಚ್ಚಿ, ಆಕೆಯನ್ನು ಮರಳಿ ಹಲ್ದ್ವಾನಿಗೆ ಕರೆ ತರಲಾಯಿತು. ನಂತರ, ಆಕೆಯನ್ನು ಆಕೆಯ ಕುಟುಂಬದ ವಶಕ್ಕೆ ಒಪ್ಪಿಸಲಾಯಿತು. ಪೊಲೀಸರು ಬಾಲಕಿಯೊಂದಿಗೆ ಸಮಾಲೋಚನೆ ನಡೆಸಲು ಪ್ರಾರಂಭಿಸಿದಾಗ, ದಿಲ್ಲಿಯ ಹೋಟೆಲೊಂದರಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಸಂಗತಿಯನ್ನು ಬಹಿರಂಗಪಡಿಸಿದಳು. ಐದು ಮಂದಿ ಆರೋಪಿಗಳ ಪೈಕಿ ಮೂವರು ಮಹಾರಾಷ್ಟ್ರದವರಾಗಿದ್ದು, ಅವರೆಲ್ಲ ಬಾಲಕಿಯನ್ನು ರೈಲಿನಲ್ಲಿ ಸಂಧಿಸಿದ್ದರು” ಎಂದು ಹೆಸರೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಾಲಕಿಯ ಹೇಳಿಕೆಯನ್ನು ಆಧರಿಸಿ ಹೋಟೆಲ್ ತಲುಪಿರುವ ಪೊಲೀಸರು, ಹೋಟೆಲ್ ಆಡಳಿತ ಮಂಡಳಿ ಒದಗಿಸಿದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಆರೋಪಿಗಳು ಒದಗಿಸಿದ್ದ ಗುರುತಿನ ಚೀಟಿ ಪ್ರತಿಗಳನ್ನು ಪರೀಕ್ಷಿಸಿದ ನಂತರ, ಅವರ ಗುರುತು ಪತ್ತೆ ಹಚ್ಚಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಲ್ದ್ವಾನಿ (ನಗರ) ವೃತ್ತಾಧಿಕಾರಿ ನಿತಿನ್ ಲೊಹಾನಿ, “ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದನ್ನು ವೈದ್ಯಕೀಯ ಪರೀಕ್ಷೆಗಳು ದೃಢಪಡಿಸಿವೆ. ಎಲ್ಲ ಐವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 70 ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಜೈಲಿಗೆ ಕಳಿಸಲಾಗಿದೆ” ಎಂದು ಹೇಳಿದ್ದಾರೆ.