ಗುಂಪು ಹಿಂಸಾಚಾರ : ಸಂತ್ರಸ್ತರು, ಹತ್ಯೆಯಾದವರಿಗೆ ಪರಿಹಾರ ಯೋಜನೆಗೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನುಮೋದನೆ
ವಿ.ಕೆ.ಸಕ್ಸೇನಾ | Photo: PTI
ಹೊಸದಿಲ್ಲಿ: ದಿಲ್ಲಿಯ ಲೆಫ್ಟಿನಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ದಿಲ್ಲಿ ಸಂತ್ರಸ್ತರ ಪರಿಹಾರ ಯೋಜನೆಯಲ್ಲಿ ತಿದ್ದುಪಡಿಯನ್ನು ಅನುಮೋದಿಸಿದ್ದಾರೆ ಎಂದು ರಾಜಭವನದ ಅಧಿಕಾರಿಗಳು ಶುಕ್ರವಾರ ತಿಳಿಸಿದರು. ಈ ತಿದ್ದುಪಡಿಯು ಗುಂಪು ಹಿಂಸಾಚಾರದಿಂದ ಸಂತ್ರಸ್ತರು ಮತ್ತು ಹತ್ಯೆಯಾದವರಿಗೆ ಪರಿಹಾರ ಪಾವತಿಗೆ ಅವಕಾಶ ಕಲ್ಪಿಸುತ್ತದೆ.
ಇಂತಹ ಯೋಜನೆಯನ್ನು ಸಿದ್ಧಪಡಿಸುವಂತೆ ಸರ್ವೋಚ್ಚ ನ್ಯಾಯಾಲಯವು 2018ರಲ್ಲಿ ರಾಜ್ಯ ಸರಕಾರಗಳಿಗೆ ನಿರ್ದೇಶ ನೀಡಿತ್ತು. ಆದರೆ ದಿಲ್ಲಿ ಸರಕಾರವು ಪ್ರಸ್ತಾವವನ್ನು ಸಲ್ಲಿಸಲು ಐದು ವರ್ಷಗಳನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದರು.
ಯೋಜನೆಯಲ್ಲಿ ಬದಲಾವಣೆಗಳ ಪ್ರಕಾರ, ಗುಂಪು ಹಿಂಸಾಚಾರ ಮತ್ತು ಗುಂಪು ಹತ್ಯೆಯ ಪರಿಣಾಮವಾಗಿ ನಷ್ಟವನ್ನು ಅನುಭವಿಸಿರುವ, ಗಾಯಗೊಂಡಿರುವ ಅಥವಾ ಮೃತಪಟ್ಟ ವ್ಯಕ್ತಿಯ ಪೋಷಕ ಅಥವಾ ಕಾನೂನುಬದ್ಧ ಉತ್ತರಾಧಿಕಾರಿಯನ್ನು ಒಳಗೊಳ್ಳುವಂತೆ ʼಬಲಿಪಶುʼ ವ್ಯಾಖ್ಯೆಯನ್ನು ತಿದ್ದುಪಡಿಗೊಳಿಸಲಾಗಿದೆ.
ಸಂತ್ರಸ್ತರಿಗೆ ಅಥವಾ ಮೃತರ ಉತ್ತರಾಧಿಕಾರಿಗಳಿಗೆ 30 ದಿನಗಳಲ್ಲಿ ಮಧ್ಯಂತರ ಪರಿಹಾರ ಪಾವತಿಯನ್ನು ಪ್ರಸ್ತಾವಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ದಿಲ್ಲಿ ಸಂತ್ರಸ್ತರ ಪರಿಹಾರ ಯೋಜನೆ, 2018ನ್ನು ಅಂದಿನ ಲೆಫ್ಟಿನೆಂಟ್ ಗವರ್ನರ್ ಅನುಮೋದನೆಯೊಂದಿಗೆ 2019, ಜೂ.17ರಂದು ಅಧಿಸೂಚಿಸಲಾಗಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶದಂತೆ ಗುಂಪು ಹಿಂಸಾಚಾರ ಮತ್ತು ಹತ್ಯೆ ಬಲಿಪಶುಗಳಿಗೆ ಪರಿಹಾರ ಪಾವತಿಯನ್ನು ಅದು ಒಳಗೊಂಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದರು.