ಮಹಾ ಕುಂಭ ಮೇಳದ ವೇಳೆ ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು: ಲೋಕಸಭೆಗೆ ತಿಳಿಸಿದ ಕೇಂದ್ರ ಸರಕಾರ

PC : PTI
ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯಗೊಂಡ ಮಹಾ ಕುಂಭ ಮೇಳದ ವೇಳೆ ಪ್ರಯಾಗ್ ರಾಜ್ ನ ಗಂಗಾ ನದಿಯ ತ್ರಿವೇಣಿ ಸಂಗಮದಲ್ಲಿನ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು ಎಂದು ಇತ್ತೀಚಿನ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯನ್ನು ಉಲ್ಲೇಖಿಸಿ ಸೋಮವಾರ ಕೇಂದ್ರ ಸರಕಾರ ಲೋಕಸಭೆಗೆ ತಿಳಿಸಿದೆ.
ಗಂಗಾ ಹಾಗೂ ಸರಸ್ವತಿ ನದಿಗಳು ಕೂಡುವ ಸ್ಥಳವನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ.
ಗಂಗಾ ನದಿಯನ್ನು ಶುದ್ಧೀಕರಿಸಲು ರಾಷ್ಟ್ರೀಯ ಗಂಗಾ ನದಿ ಸ್ವಚ್ಛತೆ ಯೋಜನೆಗೆ 2022-23, 2023-24 ಹಾಗೂ 2024-25 (ಮಾರ್ಚ್ 9ರವರೆಗೆ) ಒಟ್ಟು 7,421 ಕೋಟಿ ರೂಪಾಯಿಯನ್ನು ಒದಗಿಸಲಾಗಿದೆ ಎಂದೂ ಕೇಂದ್ರ ಸರಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ಸಮಾಜವಾದಿ ಪಕ್ಷದ ಸಂಸದ ಆನಂದ್ ಭದೌರಿಯ ಹಾಗೂ ಕಾಂಗ್ರೆಸ್ ಸಂಸದ ಸುಧಾಕರನ್ ರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರ, ನಿಗಾ ವಹಿಸಲಾಗಿದ್ದ ಎಲ್ಲ ಸ್ಥಳಗಳಲ್ಲೂ ಆಮ್ಲೀಯತೆಯ ಮಧ್ಯಮ ಮೌಲ್ಯ, ಕರಗಿದ ಆಮ್ಲಜನಕ, ಜೈವಿಕ ರಾಸಾಯನಿಕ ಆಮ್ಲಜನಕ ಬೇಡಿಕೆ ಹಾಗೂ ಮಲದ ಬ್ಯಾಕ್ಟೀರಿಯಾ ಪ್ರಮಾಣಗಳೆಲ್ಲವೂ ಸ್ನಾನಕ್ಕಾಗಿ ಅನುಮತಿ ನೀಡಲಾಗಿದ್ದ ಮಿತಿಯೊಳಗಿದ್ದವು ಎಂದು ಹೇಳಿದರು.
ಆದರೆ, ಇದಕ್ಕೂ ಮುನ್ನ, ಫೆಬ್ರವರಿ 3ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ವರದಿ ಸಲ್ಲಿಸಿದ್ದ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾ ಕುಂಭ ಮೇಳದ ವೇಳೆ ಪ್ರಯಾಗ್ ರಾಜ್ ನ ಹಲವಾರು ಸ್ಥಳಗಳಲ್ಲಿ ಅಧಿಕ ಪ್ರಮಾಣದ ಮಲದ ಬ್ಯಾಕ್ಟೀರಿಯಾಗಳು ಕಂಡು ಬಂದಿರುವುದರಿಂದ, ಆ ಸ್ಥಳಗಳಲ್ಲಿನ ನೀರು ಪ್ರಾಥಮಿಕ ಸ್ನಾನ ಯೋಗ್ಯ ನೀರಿನ ಗುಣಮಟ್ಟದ ಪ್ರಮಾಣಕ್ಕೆ ತಕ್ಕನಾಗಿಲ್ಲ ಎಂದು ತಿಳಿಸಿತ್ತು.
ಆದರೆ, ಫೆಬ್ರವರಿ 28ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಹೊಸ ವರದಿಯನ್ನು ಸಲ್ಲಿಸಿರುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾ ಕುಭ ಮೇಳದ ವೇಳೆ ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು ಎಂಬುದು ಸಾಂಖ್ಯಿಕ ವಿಶ್ಲೇಷಣೆಯಲ್ಲಿ ತಿಳಿದು ಬಂದಿದೆ ಎಂದು ಹೇಳಿದೆ.
ವಿವಿಧ ದಿನಾಂಕಗಳಂದು ಒಂದೇ ಸ್ಥಳದಲ್ಲಿ ಸಂಗ್ರಹಿಸಿದ ಮಾದರಿಗಳು ಹಾಗೂ ಒಂದೇ ದಿನದಂದು ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ವ್ಯತ್ಯಯಗೊಂಡ ದತ್ತಾಂಶ ಕಂಡು ಬರುವುದರಿಂದ, ಸಾಂಖ್ಯಿಕ ವಿಶ್ಲೇಷಣೆ ಅಗತ್ಯವಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗೆ ಸಂಗ್ರಹಿಸಲಾದ ಮಾದರಿಗಳು ನದಿಯುದ್ದಕ್ಕೂ ಹರಿಯುವ ನದಿ ನೀರಿನ ಒಟ್ಟಾರೆ ಗುಣಮಟ್ಟವನ್ನು ಸಂಪೂರ್ಣವಾಗಿ ಪ್ರತಿಫಲಿಸುವುದಿಲ್ಲ ಎಂಬುದು ಈ ವ್ಯತ್ಯಯದ ಅರ್ಥವಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ಕಮಲೇಶ್ ಸಿಂಗ್ ವರ್ಸಸ್ ಉತ್ತರ ಪ್ರದೇಶ ರಾಜ್ಯ ಹಾಗೂ ಇನ್ನಿತರರು ಪ್ರಕರಣದಲ್ಲಿ, ಮಹಾ ಕುಂಭ ಮೇಳದ ಅವಧಿಯದ್ದಕ್ಕೂ ಪ್ರಾಥಮಿಕ ನೀರಿನ ಗುಣಮಟ್ಟ ಮಾನದಂಡವನ್ನು ಪಾಲಿಸಲು ನಿಯಮಿತವಾಗಿ ಗಂಗಾ ಮತ್ತು ಯಮುನಾ ನದಿಗಳ ನೀರಿನ ಗುಣಮಟ್ಟದ ಮೇಲೆ ನಿಗಾ ಇಡಬೇಕು ಎಂದು ಡಿಸೆಂಬರ್ 23, 2024ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನ ನೀಡಿತ್ತು.