ಮಧ್ಯಪ್ರದೇಶ | ಸಹಪಾಠಿಗಳಿಂದ ಸಾಮೂಹಿಕ ಅತ್ಯಾಚಾರ: ವಿದ್ಯಾರ್ಥಿನಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ (PTI)
ಭೋಪಾಲ್: ನಾಲ್ವರು ಶಾಲಾ ಸಹಪಾಠಿಗಳು ಎಸಗಿದ ಸಾಮೂಹಿಕ ಅತ್ಯಾಚಾರ ಹಾಗೂ ಬ್ಲ್ಯಾಕ್ ಮೇಲ್ ನಿಂದ ಮನನೊಂದು 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ.
ಇದರ ಬೆನ್ನಿಗೇ, ನಾಲ್ವರು ಬಾಲಕರ ವಿರುದ್ಧ ಮೃತ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಮೃತ ಬಾಲಕಿಯ ತಂದೆಯ ಪ್ರಕಾರ, ಬಾಲಕಿಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿರುವ ಆರೋಪಿಗಳು, ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಲೈಂಗಿಕ ದೌರ್ಜನ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿರುವ ಆರೋಪಿಗಳು, ಈ ಘಟನೆ ಕುರಿತು ಯಾರಿಗಾದರೂ ತಿಳಿಸಿದರೆ, ವಿಡಿಯೊವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತೇವೆ ಎಂದು ಬಾಲಕಿಗೆ ಬೆದರಿಕೆ ಒಡ್ಡಿದ್ದಾರೆ. ಈ ಕುರಿತು ಮಂಗಳವಾರ ಬಾಲಕಿ ತನ್ನ ತಾಯಿಗೆ ತಿಳಿಸಿದರೂ, ಬಾಲಕಿಯ ಕುಟುಂಬದ ಸದಸ್ಯರು ತಕ್ಷಣವೇ ಈ ಮಾಹಿತಿಯನ್ನು ಪೊಲೀಸರಿಗೆ ನೀಡಿಲ್ಲ ಎನ್ನಲಾಗಿದೆ.
ಸಂತ್ರಸ್ತ ಬಾಲಕಿಯು ಗುರುವಾರದವರೆಗೂ ಶಾಲೆಗೆ ಹಾಜರಾಗಿದ್ದಾಳೆ. ಆದರೆ, ನಾಲ್ವರು ಆರೋಪಿಗಳು ಸಾಮೂಹಿಕ ಅತ್ಯಾಚಾರದ ವಿಡಿಯೊ ತೋರಿಸಿ, ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ ನಂತರ, ಆಕೆ ಕುಗ್ಗಿ ಹೋದಳು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಆದರೆ, ಶುಕ್ರವಾರ ಬಾಲಕಿ ತರಗತಿಗೆ ಹಾಜರಾಗಿಲ್ಲ. ಈ ಕುರಿತು ಬಾಲಕಿಯ ತಂದೆಗೆ ಶಾಲೆ ಮಾಹಿತಿ ನೀಡಿದೆ. ಕಳವಳಗೊಂಡ ಬಾಲಕಿಯ ತಂದೆ ಮನೆಗೆ ಧಾವಿಸಿದಾಗ, ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅವರ ಪತ್ತೆಗೆ ಬಲೆ ಬೀಸಿದ್ದಾರೆ.