ರಸ್ತೆಯಲ್ಲಿ ವಿದ್ಯುತ್ ಶಾಕ್ ತಗುಲಿದ್ದ ವೃದ್ಧನನ್ನು ರಕ್ಷಿಸಲು ಹೋದ ಯುವಕ ಮೃತ್ಯು
PC : timesofindia.indiatimes.com
ಗಾಝಿಯಾಬಾದ್ : ರಸ್ತೆಯಲ್ಲಿ ವಿದ್ಯುತ್ ಶಾಕ್ ತಗುಲಿ ನೋವಿನಿಂದ ನರಳುತ್ತಿದ್ದ ವಯೋವೃದ್ಧರೊಬ್ಬರಿಗೆ ಸಹಾಯ ಮಾಡಲು ಹೋದ ಯುವಕ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಘಟನೆ ಮಸೂರಿಯಲ್ಲಿ ನಡೆದಿದೆ.
22ರ ಹರೆಯದ ಯುವಕ ಗಂಗಾ ಕಾಲುವೆಯ ಬಳಿ ನೇತಾಡುತ್ತಿದ್ದ ಹೈಟೆನ್ಷನ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. 26 ಸೆಕೆಂಡುಗಳ ವೀಡಿಯೋವನ್ನು ದಾರಿಹೋಕರು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಯುವಕನು ಆಕಸ್ಮಿಕವಾಗಿ ಹೈ-ವೋಲ್ಟೇಜ್ ತಂತಿ ಮುಟ್ಟಿದ ಕ್ಷಣದಲ್ಲಿ ಕಿಡಿಗಳು ಜೋರಾಗಿ ಸ್ಫೋಟಗೊಂಡು ಆತನ ದೇಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದು ವಿಡಿಯೋದಲ್ಲಿದೆ. ದಿನಗೂಲಿ ಕಾರ್ಮಿಕ, ಮಸೂರಿಯ ನಹಾಲ್ ಗ್ರಾಮದ ಮುಹಮ್ಮದ್ ಕೈಫ್ ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸೋದರಸಂಬಂಧಿ ರಶೀದ್ನೊಂದಿಗೆ ಗಾಝಿಯಾಬಾದ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಹೈಟೆನ್ಷನ್ ತಂತಿಯನ್ನು ಸ್ಪರ್ಶಿ ವೃದ್ಧರೊಬ್ಬರು ನೋವಿನಿಂದ ಒದ್ದಾಡುತ್ತಿರುವುದನ್ನು ಕಂಡು ಕೈಫ್, ರೈಲ್ವೇ ಸೇತುವೆಯ ಬಳಿ ಬೈಕಿನಿಂದ ಇಳಿದರು ಎಂದು ಮಸೂರಿ ಎಸಿಪಿ ಸಿದ್ಧಾರ್ಥ್ ಗೌತಮ್ TOI ಗೆ ತಿಳಿಸಿದ್ದಾರೆ.
"ಕೆಲಸಕ್ಕೆ ತಡವಾಗುತ್ತಿದ್ದರೂ, ಕೈಫ್ ಮೊದಲು ವಿದ್ಯುತ್ ತಂತಿ ತಗುಲಿದ ವೃದ್ಧ ಚಾಂದ್ ಮುಹಮ್ಮದ್ ರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಚಾಂದ್ ಅವರು ಕುಳಿತಿದ್ದ ನೆಲದಿಂದ ಕೆಲವೇ ಅಡಿ ಎತ್ತರದಲ್ಲಿ 11 ಕೆವಿ ವಿದ್ಯುತ್ ತಂತಿ ನೇತಾಡುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ನಮಗೆ ತಿಳಿಸಿದರು. ವೃದ್ದನಿಗೆ ಚಿಕಿತ್ಸೆ ನೀಡುತ್ತಿರುವಾಗ, ಕೈಫ್ ಅವರ ಕೈ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ಘಾತಕ್ಕೆ ಕಾರಣವಾಯಿತು" ಎಂದು ಪೊಲೀಸ್ ಅಧಿಕಾರಿ ಹೇಳಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕೆಲವು ಸುಟ್ಟಗಾಯಗಳಾಗಿರುವ ವೃದ್ಧ ಮುಹಮ್ಮದ್ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಗಾ ಕಾಲುವೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಅವರು ವಿದ್ಯುತ್ ಸ್ಪರ್ಶಿಸಿದ್ದರು ಎನ್ನಲಾಗಿದೆ.
ಹೈಟೆನ್ಷನ್ ವಿದ್ಯುತ್ ಲೈನ್ ಬಹಳ ಸಮಯದಿಂದ ಕೆಳಕ್ಕೆ ನೇತಾಡುತ್ತಿತ್ತು ಎಂದು ಕೈಫ್ ತಂದೆ ಝುಲ್ಫಿಕರ್ ಹೇಳಿದ್ದಾರೆ. ಈ ಕುರಿತು ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಇಲಾಖೆ ತಮ್ಮ ಕೆಲಸವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇಂದು ನನ್ನ ಮಗ ಬದುಕಿರುತ್ತಿದ್ದನು ಎಂದು ಅವರು ಕಣ್ಣೀರು ಹಾಕಿದರು.
"ನಮ್ಮ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಕೇಬಲ್ ತುಂಡಾಗದಿದ್ದರೂ, ತುಂಬಾ ಕೆಳಕ್ಕೆ ನೇತಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ವಿದ್ಯುತ್ ಇಲಾಖೆಯಿಂದ ಮಾಹಿತಿ ಕೇಳಲಾಗಿದೆ" ಎಂದು ಎಸಿಪಿ ಹೇಳಿದರು.
ಸಂತ್ರಸ್ತನ ಕುಟುಂಬವು ಮಸೂರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ನಂತರ ವಿದ್ಯುತ್ ಇಲಾಖೆಯ ವಿರುದ್ಧ BNS ಸೆಕ್ಷನ್ 106 (1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ FIR ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.