ವಿದ್ಯಾರ್ಥಿಗಳ ದೆವ್ವಕಾಟದ ಭೀತಿ ಹೋಗಲಾಡಿಸಲು ತರಗತಿಯಲ್ಲೇ ನಿದ್ದೆ ಮಾಡಿದ ಶಿಕ್ಷಕ
Photo: timesofindia.indiatimes.com
ಹೈದರಾಬಾದ್: ಶಾಲೆಯ ಐದನೇ ತರಗತಿಯ ಮೂಲೆಯ ಕೊಠಡಿಯಲ್ಲಿ ದೆವ್ವಕಾಟವಿದೆ ಎಂಬ ಭೀತಿ ಈ ಶಾಲೆಯ ವಿದ್ಯಾರ್ಥಿಗಳನ್ನು ಕಾಡುತ್ತಿತ್ತು. ಶಿಕ್ಷಕರೊಬ್ಬರು ದೆವ್ವದ ಕಾಟ ಇದೆ ಎನ್ನಲಾದ ಕೊಠಡಿಯಲ್ಲೇ ರಾತ್ರಿ ನಿದ್ದೆ ಮಾಡಿ ಮರುದಿನ ಮುಂಜಾನೆ ನಗುವಿನೊಂದಿಗೆ ಹೊರಬಂದಾಗ ವಿದ್ಯಾರ್ಥಿಗಳು ನಿರಾಳವಾದರು.
ಅದಿಲಾಬಾದ್ ಜಿಲ್ಲೆಯ ಜೈನದ್ ಮಂಡಲದ ಆನಂದಪುರ ಮಂಡಲ ಪರಿಷತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾತುಲ್ ರವೀಂದ್ರ ಕಳೆದ ವಾರ ಶಿಕ್ಷಕರಾಗಿ ಸೇರಿದಾಗ ದೆವ್ವಕಾಟದ ಭೀತಿ ವಿದ್ಯಾರ್ಥಿಗಳಲ್ಲಿ ಬಲವಾಗಿತ್ತು. ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವಾಗ ಹೊರಗೆ ಮರ ಬಿದ್ದುದನ್ನು ರವೀಂದ್ರ ಗಮನಿಸಿದರು. ವಿದ್ಯಾರ್ಥಿಗಳೆಲ್ಲರೂ ಭಯದಿಂದ ನಡುಗಿದರು. ತರಗತಿಯಲ್ಲಿದ್ದ ಒಂಬತ್ತು ವಿದ್ಯಾರ್ಥಿಗಳು, ಐದನೇ ತರಗತಿಯಲ್ಲಿ ದೆವ್ವವಿದೆ ಎಂದು ಭೀತಿಯಿಂದ ಹೇಳಿದರು.
ದೆವ್ವ ಇಲ್ಲ ಎನ್ನುವುದನ್ನು ಮನವರಿಕೆ ಮಾಡುವ ಅವರ ಪ್ರಯತ್ನ ವಿಫಲವಾಯಿತು. ಖಾಲಿ ತರಗತಿಯಿಂದ ಸದ್ದುಗಳು ಬರುತ್ತಿರುವುದನ್ನು ಕೇಳಿದ್ದೇವೆ. ಅದು ದೆವ್ವದ್ದೇ ಸದ್ದು ಎಂದು ವಿದ್ಯಾರ್ಥಿಗಳು ವಾದಿಸಿದರು. ಇದು ತಪ್ಪುಕಲ್ಪನೆ ಎನ್ನುವುದನ್ನು ದೃಢಪಡಿಸಲು ವಿಚಾರವಾದಿ ಹಾಗೂ ಜನವಿಜ್ಞಾನ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾದ ಅವರು ದೆವ್ವಕಾಟದ ಕೊಠಡಿಯಲ್ಲಿ ರಾತ್ರಿ ನಿದ್ದೆ ಮಾಡುವುದಾಗಿ ಹೇಳಿದರು. ಅಮಾವಾಸ್ಯೆಯ ದಿನವಾದ ಜುಲೈ 5ರ ರಾತ್ರಿ ಕೊಠಡಿಯಲ್ಲಿ ತಂಗುವಂತೆ ವಿದ್ಯಾರ್ಥಿಗಳು ಸವಾಲು ಹಾಕಿದರು.
ಈ ಅಲಿಖಿತ ಒಪ್ಪಂದ ರಹಸ್ಯವಾಗಿಯೇ ನಡೆದಿದ್ದು, ಬೇರೆ ಯಾರಿಗೂ ತಿಳಿಯಲಿಲ್ಲ. ರಾತ್ರಿ 8 ಗಂಟೆಯ ಸುಮಾರಿಗೆ ಬೆಡ್ಶೀಟ್ ಹಾಗೂ ಟಾರ್ಚ್ನೊಂದಿಗೆ ರವೀಂದ್ರ ಆಗಮಿಸಿದ್ದನ್ನು ವಿದ್ಯಾರ್ಥಿಗಳು ನೋಡಿದರು. ಮರುದಿನ ಮುಂಜಾನೆ 6ಕ್ಕೆ ಕೊಠಡಿಯ ಹೊರಗೆ ವಿದ್ಯಾರ್ಥಿಗಳು ಬಂದು ನೋಡಿದಾಗ ರವೀಂದ್ರ ಬಾಗಿಲು ತೆರೆದು ಜೀವಂತವಾಗಿ ಹೊರಬಂದರು!
"ನನ್ನನ್ನು ನೋಡಿದ ಬಳಿಕ ವಿದ್ಯಾರ್ಥಿಗಳಿಗೆ ದೆವ್ವ ಇಲ್ಲ ಎನ್ನುವುದ ಮನವರಿಕೆಯಾಯಿತು. ಆದರೆ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ನಿಜವಾದ ಭೀತಿ ಇತ್ತು. ಶಾಲೆಯಲ್ಲಿ ದೆವ್ವ ಇದೆ ಎಂಬ ಕಾರಣಕ್ಕೆ 87 ವಿದ್ಯಾರ್ಥಿಗಳ ಪೈಕಿ ಒಬ್ಬ ಬೇರೆ ಶಾಲೆ ಸೇರಿದ್ದ" ಎಂದು ಅವರು ವಿವರಿಸಿದರು.