ಜಾರ್ಖಂಡ್ | ನಿರ್ಮಾಣ ಹಂತದ ಸೇತುವೆಯ ಗರ್ಡರ್ ಕುಸಿತ
Photo: PTI
ರಾಂಚಿ : ಜಾರ್ಖಂಡ್ ನ ಗಿರಿದಿಹ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಆಗ್ರಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆಯ ಗರ್ಡರ್ ಶನಿವಾರ ಕುಸಿದಿದೆ.
ಧಾರಾಕಾರ ಮಳೆ ಸುರಿದಿರುವುದರಿಂದ ನಿರ್ಮಾಣ ಹಂತದಲ್ಲಿರುವ ಸೇತುವೆಯ ಗರ್ಡರ್ ಶನಿವಾರ ರಾತ್ರಿ ಕುಸಿಯಿತು. ಕಂಬಗಳು ಬಾಗಿದವು. ಇದುವರೆಗೆ ಯಾವುದೇ ರೀತಿಯ ಪ್ರಾಣ ಹಾನಿ ಉಂಟಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫತೇಹ್ಪುರ ಭೆಲ್ವಾಘಾಟಿ ಮುಖ್ಯ ರಸ್ತೆಯಲ್ಲಿ ದುಮ್ರಿಟೋಲಾ ಹಾಗೂ ಕರಿಫಾರಿ ನಡುವೆ ಆಗ್ರಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಜಾರ್ಖಂಡ್ ಹಾಗೂ ಬಿಹಾರದ 24ಕ್ಕೂ ಅಧಿಕ ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸಲಿದೆ.
ಜಿಲ್ಲೆಯಲ್ಲಿ ಶನಿವಾರ ಸಂಜೆ ಧಾರಾಕಾರ ಮಳೆ ಸುರಿದು ಆಗ್ರಾ ನದಿಯ ನೀರಿನ ಮಟ್ಟ ಏರಿಕೆಯಾಯಿತು. ಇದರಿಂದ ನಿರ್ಮಾಣ ಹಂತದಲ್ಲಿರುವ ಸೇತುವೆಯ ಗರ್ಡರ್ ಕುಸಿಯಿತು ಹಾಗೂ ಪ್ರವಾಹದಲ್ಲಿ ತೇಲಿಕೊಂಡು ಹೋಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಗಮನಾರ್ಹ ವಿಚಾರವೆಂದರೆ, ಈ ಸೇತುವೆಯನ್ನು ರಾಜ್ಯ ರಸ್ತೆ ನಿರ್ಮಾಣ ಇಲಾಖೆ ನಿರ್ಮಾಣ ಮಾಡುತ್ತಿದೆ. ಈ ಸೇತುವೆಯ ನಿರ್ಮಾಣ ಕಾಮಗಾರಿ 3 ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಕಳೆದ ಒಂದು ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಗರ್ಡರ್ ಕುಸಿದ ಹಿನ್ನೆಲೆಯಲ್ಲಿ ಈಗ ಸೇತುವೆಯ ಗುಣಮಟ್ಟದ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
ಆದರೆ, ಕಾರ್ಯ ನಿವಾರ್ಹಕ ಎಂಜಿನಿಯರ್ ವಿನಯ್ ಕುಮಾರ್, ಭಾರೀ ಮಳೆಯಿಂದಾಗಿ ಸೇತುವೆಗೆ ಸಣ್ಣಪುಟ್ಟ ಹಾನಿ ಉಂಟಾಗಿದೆ. ತನಿಖೆಯ ಬಳಿಕ ಮಾತ್ರವೇ ಸೂಕ್ತ ತೀರ್ಮಾನಕ್ಕೆ ಬರಬಹುದು ಎಂದಿದ್ದಾರೆ.