ಬಾಲಕಿಗೆ ಕಿರುಕುಳ ಆರೋಪ: ಉತ್ತರಾಖಂಡದಲ್ಲಿ ಪ್ರತಿಭಟನಾಕಾರರಿಂದ ಮುಸ್ಲಿಮರ ಅಂಗಡಿಗಳಿಗೆ ದಾಳಿ
PC : scroll.in
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ನಂದನಗರದಲ್ಲಿ ವ್ಯಕ್ತಿಯೋರ್ವ 14ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋಪಗಳ ಬಳಿಕ ರವಿವಾರ ಪ್ರತಿಭಟನೆ ನಡೆಸಿದ ಸ್ಥಳೀಯರು ಮುಸ್ಲಿಮರಿಗೆ ಸೇರಿದ ಕನಿಷ್ಠ 10 ಅಂಗಡಿಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ.
ಪಟ್ಟಣದಲ್ಲಿ ಕ್ಷೌರಿಕನಾಗಿ ಕೆಲಸ ಮಾಡುತ್ತಿರುವ ಆರೋಪಿಯು ಆ.22ರಂದು ಬಾಲಕಿಗೆ ಅಶ್ಲೀಲ ಸನ್ನೆಗಳನ್ನು ಮಾಡಿದ್ದ ಎನ್ನಲಾಗಿದೆ. ಬಾಲಕಿಯ ತಂದೆ ಪೋಲಿಸ್ ದೂರನ್ನು ದಾಖಲಿಸಿದ ಬಳಿಕ ಶನಿವಾರ ಈ ಘಟನೆ ಬೆಳಕಿಗೆ ಬಂದಿತ್ತು.
ರವಿವಾರ ಬೆಳಿಗ್ಗೆ ನಂದನಗರದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಸ್ಥಳೀಯರ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದರು. ಕೆಲವು ಪ್ರತಿಭಟನಾಕಾರರು ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ್ದು, ಮುಸ್ಲಿಮರಿಗೆ ಸೇರಿದ ಕನಿಷ್ಠ 10 ಅಂಗಡಿಗಳು ಹಾನಿಗೀಡಾಗಿವೆ. ಆರೋಪಿಯ ಕ್ಷೌರದಂಗಡಿಯನ್ನು ಧ್ವಂಸಗೊಳಿಸಲೂ ಪ್ರತಿಭಟನಾಕಾರರು ಪ್ರಯತ್ನಿಸಿದ್ದರು.
ರವಿವಾರ ರಾತ್ರಿ ನೆರೆಯ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದರು.
ಮಹಿಳೆಯರ ಘನತೆಯನ್ನು ಕಾಯ್ದುಕೊಳ್ಳುವುದು ಸರಕಾರದ ಅತ್ಯುನ್ನತ ಆದ್ಯತೆಯಾಗಿದೆ ಎಂದು ಹೇಳಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿಯವರು, ‘ನಮ್ಮ ರಾಜ್ಯದ ಹೆಣ್ಣುಮಕ್ಕಳ ವಿರುದ್ಧ ಇಂತಹ ಘಟನೆಗಳನ್ನು ನಾವು ಖಂಡಿಸುತ್ತೇವೆ ಮತ್ತು ಆರೋಪಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯನ್ನು ಖಚಿತಪಡಿಸುತ್ತೇವೆ ’ಎಂದಿದ್ದಾರೆ.