ಲೈಂಗಿಕ ಕಿರುಕುಳ ಪ್ರತಿಭಟಿಸಿದ ಬಾಲಕಿಯನ್ನು ಚಲಿಸುತ್ತಿದ್ದ ರೈಲಿನೆದುರು ಎಸೆದ ದುಷ್ಕರ್ಮಿಗಳು
ಉತ್ತರಪ್ರದೇಶದ ಬರೇಲಿಯಲ್ಲಿ ನಡೆದ ಭೀಕರ ಘಟನೆ ; ಕೈ, ಕಾಲುಗಳನ್ನು ಕಳೆದುಕೊಂಡ ಬಾಲಕಿ
ಬರೇಲಿ: ತನಗೆ ಲೈಂಗಿಕ ಕಿರುಕುಳ ನೀಡುವುದನ್ನು ಪ್ರತಿಭಟಿಸಿದ 17 ವರ್ಷದ ಬಾಲಕಿಯೊಬ್ಬಳನ್ನು ದುಷ್ಕರ್ಮಿಗಳು ಚಲಿಸುತ್ತಿದ್ದ ರೈಲಿನ ಎದುರು ಎಸೆದ ಭೀಕರ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ಬುಧವಾರ ವರದಿಯಾಗಿದೆ. ಕೈ ಹಾಗೂ ಕಾಲುಗಳನ್ನು ಕಳೆದುಕೊಂಡ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಳೆಂದು ಕುಟುಂಬಿಕರು ತಿಳಿಸಿದ್ದಾರೆ.
ಬರೇಲಿ ನಗರದ ಜಿ.ಬಿ.ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆಕೆಗೆ ದೇಹದಲ್ಲಿ ಹಲವು ಮೂಳೆಗಳು ಮುರಿದಿವೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ಇದೇ ವೇಳೆ ಕರ್ತವ್ಯ ನಿರ್ಲಕ್ಷ್ಯದ ಆರೋಪದಲ್ಲಿ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಪದವಿಪೂರ್ವ ವಿದ್ಯಾರ್ಥಿನಿಯಾದ ಸಂತ್ರಸ್ತ ಬಾಲಕಿಯು, ಪ್ರತಿದಿನ ಸಂಜೆ ಹೊತ್ತಿನಲ್ಲಿ ಟ್ಯೂಶನ್ ಗೆ ತೆರಳುತ್ತಿದ್ದಾಗ ಓರ್ವ ಯುವಕ ಹಾಗೂ ಆತನ ಸಂಗಡಿಗರು ಕಿರುಕುಳ ನೀಡುತ್ತಿದ್ದರೆಂದು ಆಕೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯ ಕುಟುಂಬಿಕರ ಮೇಲೂ ಪಾಲಕರು ದೂರು ನೀಡಿದ್ದಾರೆ.
ಬರೇಲಿಯಯ ಖಾಡವು ರೈಲ್ವೆ ಕ್ರಾಸಿಂಗ್ ಬಳಿ ಮಂಗಳವಾರ ರಾತ್ರಿ ರಕ್ತಸಿಕ್ತ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದು, ಆಕೆ ಎರಡೂ ಕಾಲುಗಳು ಮತ್ತು ಒಂದು ಕೈ ತುಂಡಾಗಿದೆ. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಕ್ರಿಯೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ನಗರ ಪೊಲೀಸ್ ಅಧೀಕ್ಷಕ ರಾಹುಲ್ ಭಾಟಿ ಅವರು ಹೇಳಿಕೆಯೊಂದನ್ನು ನೀಡಿ, ಬಾಲಕಿಯನ್ನು ಚಲಿಸುತ್ತಿದ್ದ ರೈಲಿನೆದುರು ಎಸೆಯಲಾಗಿತ್ತೇ ಅಥವಾ ಆಕೆ ಬೇರೇ ಯಾವುದೇ ಕಾರಣಗಳಿಂದಾಗಿ ಗಾಯಗೊಂಡಳೇ ಎಂಬುದನ್ನು ಈಗಲೇ ಖಚಿತಪಡಿಸಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ.
ಟ್ಯೂಶನ್ ತರಗತಿಯಿಂದ ಮನೆಗೆ ಹಿಂತಿರುಗುತ್ತಿದ್ದ ಬಾಲಕಿಯನ್ನು ಇಬ್ಬರು ಯುವಕರು ತಡೆದಿದ್ದು, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಆಗ ಆಕೆ ಪ್ರತಿಭಟಿಸಿದಾಗ ಕ್ರುದ್ಧರಾದ ಅವರು ಆಕೆಯನ್ನು ರೈಲಿನೆದುರು ಎಸೆದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಗಮನಕ್ಕೆ ತರಲಾಗಿದ್ದು, ಬಾಲಕಿಯ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದೆಂದು ಅವರು ತಿಳಿಸಿದರು.
ಬಾಲಕಿಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಮಟ್ಟದ ಆಸ್ಪತ್ರೆಗೆ ದಾಖಲಿಸಲಾಗುವುದು. ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರಕಾರವೇ ಸಂಪೂರ್ಣವಾಗಿ ಭರಿಸಲಿದೆ ಎಂದರು.