ರಾಣಿ ಲಕ್ಷ್ಮೀಬಾಯಿ ಹೆಸರಿಗೆ ಕತ್ತರಿ; ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಆರೆಸ್ಸೆಸ್ ನಾಯಕಿಯ ಹೆಸರು

Photo credit: telegraphindia.com
ಮುಂಬೈ: ಮಹಾರಾಷ್ಟ್ರದ ವಾರ್ಧಾ ಎಂಬಲ್ಲಿರುವ ರಾಣಿ ಲಕ್ಷ್ಮೀಬಾಯಿ ವಿದ್ಯಾರ್ಥಿನಿಯರ ಹಾಸ್ಟೆಲ್ ಹೆಸರಿನಿಂದ ರಾಣಿ ಪದವನ್ನು ಕೈಬಿಟ್ಟು ಕೇಳ್ಕರ್ ಎಂಬ ಪದವನ್ನು ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ ಸೇರಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಈ ವರ್ಷದ ಜನವರಿಯಲ್ಲಿ ವಿವಿ ಆಡಳಿತವು ನೂತನವಾಗಿ ನಿರ್ಮಾಣಗೊಂಡ ವಿದ್ಯಾರ್ಥಿನಿಯರ ಹಾಸ್ಟೆಲ್ಗೆ ಆರೆಸ್ಸೆಸ್ ಮಹಿಳಾ ಘಟಕವಾಗಿರುವ ರಾಷ್ಟ್ರ ಸೇವಿಕಾ ಸಮಿತಿ ಸ್ಥಾಪಕಿ ಲಕ್ಷ್ಮೀಬಾಯಿ ಕೇಳ್ಕರ್ ಅವರ ಹೆಸರಿಡಲು ನಿರ್ಧರಿಸಲಾಗಿತ್ತು. ಈ ಹಿಂದೆ ಇದೇ ವಿವಿ ಈ ಹಾಸ್ಟೆಲ್ಗೆ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಹೆಸರನ್ನಿಡಲು ನಿರ್ಧರಿಸಿತ್ತು.
ಆದರೆ ರಾಣಿ ಲಕ್ಷ್ಮೀಬಾಯಿ ಬದಲು ಲಕ್ಷ್ಮೀಬಾಯಿ ಕೇಳ್ಕರ್ ಎಂಬ ಹೆಸರನ್ನಿಟ್ಟಿದ್ದು ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಲಕ್ಷ್ಮೀಬಾಯಿಗೆ ಮಾಡಿದ ಅವಮಾನವೆಂದೇ ಹಲವು ಶಿಕ್ಷಣ ತಜ್ಞರು ಹೇಳುತ್ತಿದ್ದಾರೆ.
ಹೆಸರು ಬದಲಾವಣೆ ನಿರ್ಧಾರವನ್ನು ಪ್ರೊ ರಜನೀಶ್ ಕುಮಾರ್ ಶುಕ್ಲಾ ಅವರು ಉಪಕುಲಪತಿಗಳಾಗಿದ್ದಾಗ ಕೈಗೊಳ್ಳಲಾಗಿತ್ತು. ಅವರು ಆಗಸ್ಟ್ 2023 ರಲ್ಲಿ ರಾಜೀನಾಮೆ ನೀಡಿದ್ದರು.
ಈ ವಿವಿ ಕ್ಯಾಂಪಸ್ಸಿನಲ್ಲಿ 108 ಅಡಿ ಎತ್ತರದ ವಿವೇಕಾನಂದ ಪ್ರತಿಮೆ ಸ್ಥಾಪಿಸುವ ಶಿಫಾರಸ್ಸನ್ನೂ ವಿವಿ ಸುಂದರೀಕರಣ ಸಮಿತಿ ಮಾಡಿದೆ. ಈ ಕ್ಯಾಂಪಸ್ಸಿನಲ್ಲಿರುವ ಆಸ್ಪತ್ರೆಗೆ 1925ರಲ್ಲಿ ಆರೆಸ್ಸೆಸ್ ಸ್ಥಾಪಿಸಿದ ಬಲಿರಾಮ್ ಹೆಡ್ಗೇವಾರ್ ಹೆಸರಿಡಬೇಕೆಂಬ ಶಿಫಾರಸನ್ನೂ ಮಾಡಲಾಗಿದೆ.